ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿ.ವೀರಭದ್ರ ಸಿಂಗ್ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್, ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಅವರು ಪಾಲ್ಗೊಂಡಿದ್ದರು
ಪಿಟಿಐ ಚಿತ್ರ
ಶಿಮ್ಲಾ: ‘ವಿಪತ್ತು ಪೀಡಿತ ಹಿಮಾಚಲ ಪ್ರದೇಶಕ್ಕೆ ಕೇಂದ್ರ ಸರ್ಕಾರವು ಅಗತ್ಯವಿರುವಷ್ಟು ನೆರವು ನೀಡುತ್ತಿಲ್ಲ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸೋಮವಾರ ಆರೋಪಿಸಿದರು.
ಶಿಮ್ಲಾದ ಐತಿಹಾಸಿಕ ರಿಡ್ಜ್ ಮೈದಾನದಲ್ಲಿನ ದೌಲತ್ ಸಿಂಗ್ ಪಾರ್ಕ್‌ನಲ್ಲಿ, ಆರು ಬಾರಿ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ದಿ.ವೀರಭದ್ರ ಸಿಂಗ್ ಅವರ ಪ್ರತಿಮೆಯನ್ನು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅನಾವರಣಗೊಳಿಸಿದ ನಂತರ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಪ್ರಿಯಾಂಕಾ, ‘ಕೇಂದ್ರ ಸರ್ಕಾರವು ಕಾಂಗ್ರೆಸ್ ನೇತೃತ್ವದ ಸರ್ಕಾರಗಳ ಆಡಳಿತವಿರುವ ರಾಜ್ಯಗಳನ್ನು ನಿರ್ಲಕ್ಷಿಸುತ್ತಿದೆ’ ಎಂದು ದೂರಿದರು.
‘ಸುಖ್ವಿಂದರ್ ಸುಖು ಮುಖ್ಯಮಂತ್ರಿಯಾದ ಬಳಿಕ ಹಿಮಾಚಲದಲ್ಲಿ ಭಾರಿ ಮಳೆ ಸುರಿಯಿತು. ನೆರವಿಗೆ ಧಾವಿಸುವಂತೆ ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ವಿನಂತಿಸಿದರೂ ಸ್ಪಂದಿಸಲಿಲ್ಲ’ ಎಂದು ಹೇಳಿದರು.
‘ಚುನಾವಣೆಗಳಲ್ಲಿ ಗೆಲ್ಲಲು ಮಾತ್ರ ಆಸಕ್ತಿ ಹೊಂದಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು, ಕಾಂಗ್ರೆಸ್ ಆಡಳಿತವಿರುವ ಹಿಮಾಚಲ ಪ್ರದೇಶಕ್ಕೆ ತಾರತಮ್ಯ ಮಾಡಿದೆ’ ಎಂದು ಆರೋಪಿಸಿದರು.
‘ಈ ವರ್ಷದ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ರಾಜ್ಯದಲ್ಲಿ 47 ಮೇಘಸ್ಫೋಟ, 98 ದಿಢೀರ್ ಪ್ರವಾಹ, 148 ಪ್ರಮುಖ ಭೂಕುಸಿತ ಸಂಭವಿಸಿವೆ. ಮಳೆ ಸಂಬಂಧಿತ ಘಟನೆಗಳಲ್ಲಿ 270 ಜನರು ಮೃತಪಟ್ಟಿದ್ದು, ಒಟ್ಟು ₹5,426 ಕೋಟಿ ಮೊತ್ತದ ಹಾನಿಯಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.