ADVERTISEMENT

‘ಯುಪಿ ಮಾದರಿ’ಉತ್ತರ: ನಿರ್ಮಲಾ ಸೀತಾರಾಮನ್ ವಿರುದ್ಧ ಪ್ರಿಯಾಂಕಾ ಗಾಂಧಿ ಗರಂ

ಪಿಟಿಐ
Published 2 ಫೆಬ್ರುವರಿ 2022, 13:54 IST
Last Updated 2 ಫೆಬ್ರುವರಿ 2022, 13:54 IST
   

ಲಖನೌ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ 'ಯುಪಿ ಮಾದರಿ' ಹೇಳಿಕೆ ಬಗ್ಗೆ ವಿವಾದ ಭುಗಿಲೆದ್ದಿದ್ದು, ಉತ್ತರ ಪ್ರದೇಶದ ಜನರು ತಮ್ಮ ಆಡು ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಹೆಮ್ಮೆಪಡುತ್ತಾರೆ. ಹಾಗಾಗಿ, ಈ ರೀತಿಯ ಹೇಳಿಕೆ ನೀಡುವ ಮೂಲಕ ಆ ಜನರನ್ನು ‘ಅವಮಾನಿಸುವ’ಅಗತ್ಯವಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ವಾಗ್ದಾಳಿ ನಡೆಸಿದ್ದಾರೆ.

ಉತ್ತರ ಪ್ರದೇಶದ ಸಂಸದರೂ ಆಗಿರುವ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಮಂಗಳವಾರ, ‘ಭವಿಷ್ಯದ ದೃಷ್ಟಿಯಿಂದ ಮಂಡಿಸಿರುವ ಬಜೆಟ್ ಬಹುಶಃ ರಾಹುಲ್‌ ಗಾಂಧಿ ಅವರಿಗೆ ಅರ್ಥವಾಗದಿರಬಹುದು’ಎಂದು ಹೇಳಿದ್ದರು.

ರಾಹುಲ್ ಗಾಂಧಿ ಕುರಿತು ಚೌಧರಿ ಅವರ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಸೀತಾರಾಮನ್, ‘ಅವರು (ಚೌಧರಿ) ‘ಯುಪಿ ಮಾದರಿ’ಯ ಉತ್ತರವನ್ನು ನೀಡಿದ್ದಾರೆ ಎಂದು ನಾನು ಭಾವಿಸುತ್ತೇನೆ, ಅದು ಯುಪಿಯಿಂದ ಓಡಿಹೋದ ಸಂಸದರಿಗೆ ಸಾಕಾಗುತ್ತದೆ’ಎಂದು ಹೇಳಿದ್ದರು.

ADVERTISEMENT

ಹಿಂದಿಯಲ್ಲಿ ಟ್ವೀಟ್ ಮಾಡುವ ಮೂಲಕ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಯನ್ನು ಟೀಕಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ,‘ಸೀತಾರಾಮನ್‌ ಜೀ, ನೀವು ಉತ್ತರ ಪ್ರದೇಶಕ್ಕೆ ಬಜೆಟ್‌ನಲ್ಲಿ ಏನನ್ನೂ ನೀಡಿಲ್ಲ. ಪರವಾಗಿಲ್ಲ... ಆದರೆ, ಉತ್ತರ ಪ್ರದೇಶದ ಜನರನ್ನು ಈ ರೀತಿ ಅವಮಾನಿಸುವ ಅವಶ್ಯಕತೆ ಏನಿತ್ತು. ಉತ್ತರ ಪ್ರದೇಶದ ಜನರು 'ಯುಪಿ ಮಾದರಿ' ಬಗ್ಗೆ ಹೆಮ್ಮೆಪಡುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಿ. ನಾವು ಯುಪಿಯ ಭಾಷೆ, ಆಡುಭಾಷೆ, ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ಹೆಮ್ಮೆಪಡುತ್ತೇವೆ’ಎಂದು ಹೇಳಿದ್ದಾರೆ.

ಎಸ್‌ಪಿ ಎಂಎಲ್‌ಸಿ ಅಶುತೋಷ್ ಸಿನ್ಹಾ ಕೂಡ ಸಚಿವರ ಹೇಳಿಕೆಗೆ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸಚಿವರೊಬ್ಬರು ಮಾಡಿರುವ 'ಯುಪಿ ಮಾದರಿಯ' ಹೇಳಿಕೆ ಸೂಕ್ತವಲ್ಲ. ಇದು ಸಂಕುಚಿತ ಮನೋಭಾವವನ್ನು ಮಾತ್ರ ತೋರಿಸುತ್ತದೆ ಎಂದು ಸಿನ್ಹಾ ಹೇಳಿದ್ದಾರೆ.

‘ಈ ಹೇಳಿಕೆ ಸಂಪೂರ್ಣ ಅಸಮರ್ಪಕವಾಗಿದೆ, ರಾಜ್ಯದ ಮೇಲಿನ ನೇರವಾದ ವ್ಯಂಗ್ಯವಾಗಿದೆ, ಚುನಾವಣಾ ಸಮಯದಲ್ಲಿ ಮತ ಕೇಳಲು ಬಂದು ನಂತರ ಇಂತಹ ಕೆಟ್ಟ ಟೀಕೆಗಳನ್ನು ಮಾಡುತ್ತೀರಿ, ನಿರ್ಮಲಾ ಸೀತಾರಾಮನ್ ಜೀ ಅವರು ತಮ್ಮನ್ನು ರಾಜ್ ಠಾಕ್ರೆ ಅವರಿಗೆ ಸಮಾನರೆಂದು ಭಾವಿಸಿದ್ದರೆ ಈ ಹೇಳಿಕೆ ತಪ್ಪಾಗುವುದಿಲ್ಲ’ಎಂದು ರಾಷ್ಟ್ರೀಯ ಕಿಸಾನ್ ಮಂಚ್ ಅಧ್ಯಕ್ಷ ಶೇಖರ್ ದೀಕ್ಷಿತ್ ಹೇಳಿದ್ದಾರೆ.

‘ಉತ್ತರ ಪ್ರದೇಶಕ್ಕಾಗಿ ಅವರ ಮನಸ್ಸಿನಲ್ಲಿ ಇಷ್ಟೊಂದು ವಿಷವಿದ್ದರೆ, ಪ್ರಧಾನಿ ಯುಪಿಗೆ ಚುನಾವಣೆಗೆ ಸ್ಪರ್ಧಿಸಲು ಏಕೆ ಬರುತ್ತಾರೆ? ಯುಪಿ ಜನರು ಹೆಚ್ಚು ಅನಕ್ಷರಸ್ಥರಾಗಿದ್ದರೆ, ಯುಪಿ ಗರಿಷ್ಠ ಸಂಖ್ಯೆಯ ಪ್ರಧಾನಿಗಳನ್ನು ಹೇಗೆ ನೀಡಿದೆ? ಯುಪಿ ಮತ್ತು ಬಿಹಾರವು ಗರಿಷ್ಠ ಸಂಖ್ಯೆಯ ಕಾರ್ಮಿಕರನ್ನು ಮತ್ತು ಕುಶಲ ಕಾರ್ಮಿಕರನ್ನು ಒದಗಿಸುತ್ತದೆ. ಇಂತಹ ಹೇಳಿಕೆಗಳು ನಾಚಿಕೆಗೇಡಿನವು’ಎಂದು ದೀಕ್ಷಿತ್ ಕಿಡಿ ಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.