ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ
ಪಿಟಿಐ ಚಿತ್ರ
ನವದೆಹಲಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ತಮ್ಮ ಕ್ಷೇತ್ರದಲ್ಲಿ ಬುಡಕಟ್ಟು ಸಮುದಾಯದ ಜನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದಿದ್ದಾರೆ.
ವಯನಾಡಿನಲ್ಲಿರುವ 3,200 ಬುಡಕಟ್ಟು ನೆಲೆಗಳಿಗೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ರಸ್ತೆ ಸಂಪರ್ಕ ಕಲ್ಪಿಸುವ ತುರ್ತು ಇದೆ ಎಂದು ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಗ್ರಾಮಗಳಿಗೆ ಯೋಜನೆ ಅಡಿಯಲ್ಲಿ ರಸ್ತೆ ಸಂಪರ್ಕ ಕಲ್ಪಿಸಲಾಗುತ್ತಿದೆಯಾದರೂ, ಯೋಜನೆಯ ಅರ್ಹತಾ ಮಾನದಂಡಗಳು ಸಮುದಾಯದವರ ಹೆಚ್ಚಿನ ನೆಲೆಗಳು ಸೌಲಭ್ಯ ವಂಚಿತವಾಗುವಂತೆ ಮಾಡಿವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಯೋಜನೆ ಅಡಿಯಲ್ಲಿ ಸೌಲಭ್ಯ ಕಲ್ಪಿಸಲು ಗ್ರಾಮದಲ್ಲಿ ಕನಿಷ್ಠ 500 ಜನರಿರಬೇಕು ಹಾಗೂ ಅದರಲ್ಲಿ ಶೇ 50 ರಷ್ಟು ಮಂದಿ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು ಎಂಬುದು ಮಾನದಂಡವಾಗಿದೆ.
ನಿರ್ದಿಷ್ಟ ಸುಮದಾಯದ ಜನರು ವಿವಿಧ ಸಾಮಾಜಿಕ ಮತ್ತು ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ಪ್ರತಿಪಾದಿಸಿರುವ ಅವರು, ಮಾನದಂಡಗಳನ್ನು ಸಡಿಲಿಸುವಂತೆ ಕೋರಿದ್ದಾರೆ.
ರಸ್ತೆ, ವಿದ್ಯುತ್ ಸಂಪರ್ಕಗಳನ್ನು ಕಲ್ಪಿಸುವುದು ಮೂಲಸೌಕರ್ಯದ ಅವಶ್ಯಕತೆ ಎಂಬುದಷ್ಟೇ ಅಲ್ಲ. ಇದರಿಂದ, ಆರೋಗ್ಯ ರಕ್ಷಣೆ, ಶಿಕ್ಷಣ, ಉದ್ಯೋಗ ಅವಕಾಶಗಳನ್ನು ಸುಧಾರಿಸಲು ಮತ್ತು ಮಾನಸಿಕವಾಗಿ ಹೊರಗಿನಂತಿರುವ ಈ ಸಮುದಾಯಗಳನ್ನು ಮುನ್ನೆಲೆಗೆ ತರಲು ಸಾಧ್ಯವಾಗಲಿದೆ ಎಂದು ಒತ್ತಿ ಹೇಳಿದ್ದಾರೆ.
ಸರ್ಕಾರವು ಈ ಸಮುದಾಯಗಳ ಕಲ್ಯಾಣಕ್ಕೆ ಆದ್ಯತೆ ನೀಡಬೇಕು. ಎಲ್ಲರ ಸಮಾನ ಅಭಿವೃದ್ಧಿಯ ಭರವಸೆಯನ್ನು ದೂರದ ಪ್ರದೇಶಗಳಿಗೂ ವಿಸ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.