ADVERTISEMENT

ಬಿಜೆಪಿ ಮುಖಂಡರಿಗೆ ಪ್ರಿಯಾಂಕಾ ಗಾಂಧಿಯ ‘ಭೀತಿ’: ಕಾಂಗ್ರೆಸ್‌ ಅಧ್ಯಕ್ಷ ರಾಜ್‌ ಬಬ್

ಪಿಟಿಐ
Published 22 ಸೆಪ್ಟೆಂಬರ್ 2019, 19:30 IST
Last Updated 22 ಸೆಪ್ಟೆಂಬರ್ 2019, 19:30 IST
   

ಲಖನೌ: ‘ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಿವಿಧ ವಿಷಯಗಳಲ್ಲಿ ತಳೆದಿರುವ ನಿಲುವು ಈಗ ಜನರ ಅಭಿಪ್ರಾಯಗಳಲ್ಲೂ ಧ್ವನಿಸುತ್ತಿದೆ. ಬಿಜೆಪಿಗೆ ಯಾರ ಬಗ್ಗೆಯಾದರೂ ಭೀತಿ ಇದ್ದರೆ ಅವರು ಪ್ರಿಯಾಂಕಾ ಮಾತ್ರ’ ಎಂದು ಉತ್ತರ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ರಾಜ್‌ ಬಬ್ಬರ್ ಪ್ರತಿಪಾದಿಸಿದರು.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಸ್ತುತ ಕೆಳಹಂತದ ಕಾರ್ಯಕರ್ತರನ್ನು ಹೆಚ್ಚು ಗಮನಿಸುತ್ತಿದ್ದಾರೆ. ಖಂಡಿತವಾಗಿ ಪಕ್ಷದ ಮುಖಂಡರು ಅಥವಾ ಪದಾಧಿಕಾರಿಗಳನ್ನು ಅಲ್ಲ. ಇದೊಂದು ಆಶಾದಾಯಕವಾದ ಬೆಳವಣಿಗೆ ಆಗಿದೆ ಎಂದೂ ಭಾನುವಾರ ಅಭಿಪ್ರಾಯಪಟ್ಟರು.

‘ಪ್ರಿಯಾಂಕಾ ಗಾಂಧಿ ಉಲ್ಲೇಖಿಸುವ ಅಂಶಗಳಿಗೆ ಉತ್ತರಿಸಲು ಬಿಜೆಪಿ ನಾಯಕರಿಗೆ ಆಗುತ್ತಿಲ್ಲ. ಬಿಜೆಪಿ ಮುಖಂಡರ ಪ್ರತಿಕ್ರಿಯೆ ಕೇವಲ ಟ್ವಿಟರ್‌ಗೆ ಸೀಮಿತವಾಗಿದೆ. ಪ್ರಿಯಾಂಕಾ ಪ್ರಸ್ತಾಪಿಸಿದ ಅಂಶಗಳು ಈಗ ಜನರ ಅಭಿಪ್ರಾಯಗಳಲ್ಲಿಯೂ ಧ್ವನಿಸುತ್ತಿದೆ ಎಂಬುದು ವಾಸ್ತವ’ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ADVERTISEMENT

ಜನರಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗುರುತಿಸಲು ಅಧಿಕಾರದ ಪ್ರಭಾವಕ್ಕೆ ಗುರಿಯಾಗಿರುವ ಬಿಜೆಪಿ ಮುಖಂಡರು ವಿಫಲರಾಗಿದ್ದಾರೆ ಎಂದರು. ಲೋಕಸಭೆ ಚುನಾವಣೆಯ ಹಿನ್ನಡೆ ಬಳಿಕ ರಾಜ್ಯ ಕಾಂಗ್ರೆಸ್‌ ಹೆಚ್ಚಾಗಿ ಪ್ರಿಯಾಂಕಾ ಅವರನ್ನು ಅವಲಂಬಿಸಿದೆಯೇ ಎಂಬ ಪ್ರಶ್ನೆಗೆ, ‘ಅವರು ಪೂರ್ಣಪ್ರಮಾಣದ ಹೊಣೆಗಾರಿಕೆಯನ್ನು ಹೊತ್ತುಕೊಂಡಿದ್ದು, ಎಲ್ಲರೂ ಅವರ ಮೇಲೇ ವಿಶ್ವಾಸವನ್ನು ಹೊಂದಿದ್ದಾರೆ’ ಎಂದು ತಿಳಿಸಿದರು.

ರಾಜ್ಯದಲ್ಲಿನ ಉಪ ಚುನಾವಣೆ ಕುರಿತು ಮಾತನಾಡಿದ ಅವರು, ‘ಬಿಜೆಪಿಗೆ ಸ್ಪರ್ಧೆ ನೀಡಲು ಕಾಂಗ್ರೆಸ್‌ ಮಾತ್ರ ಶಕ್ತವಾಗಿದೆ. ಅನ್ಯರಿಗೆ ಆತಂಕವಿದೆ. ಕಾಂಗ್ರೆಸ್ ಗಂಭೀರವಾಗಿ ಎದುರಿಸುತ್ತಿದೆ. ನೆಲದ ಭಾವನೆ ಅರ್ಥಮಾಡಿಕೊಳ್ಳುವ ಜನರು ಕಾಂಗ್ರೆಸ್‌ ಜೊತೆಗೆ ಕೈಜೋಡಿಸುತ್ತಿದ್ದಾರೆ.ಇದು ಶುಭಸೂಚಕ’ ಎಂದರು.

ಉತ್ತರ ಪ್ರದೇಶದ ಹಮಿರ್‌ಪುರ್ ವಿಧಾನಸಭಾ ಕ್ಷೇತ್ರಕ್ಕೆ ಸೆ. 23ರಂದು ಉಪಚುನಾವಣೆ ನಡೆಯಲಿದೆ. ಬಿಜೆಪಿ, ಬಿಎಸ್‌ಪಿ, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ ನಡುವೆ ಸ್ಪರ್ಧೆ ಇದ್ದು ಚತುಷ್ಕೋನ ಸ್ಪರ್ಧೆ ಉಂಟಾಗುವ ಸಂಭವವವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.