ADVERTISEMENT

ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆ ಪ್ರಕರಣ: ಇನೋವಾ ಕಾರು ಎನ್‌ಐಎ ವಶಕ್ಕೆ

ಪಿಟಿಐ
Published 14 ಮಾರ್ಚ್ 2021, 8:26 IST
Last Updated 14 ಮಾರ್ಚ್ 2021, 8:26 IST
ರಾಷ್ಟ್ರೀಯ ತನಿಖಾ ಸಂಸ್ಥೆ
ರಾಷ್ಟ್ರೀಯ ತನಿಖಾ ಸಂಸ್ಥೆ   

ಮುಂಬೈ: ಉದ್ಯಮಿ ಮುಕೇಶ್‌ ಅಂಬಾನಿ ಅವರ ಮನೆ ಬಳಿ ಸ್ಫೋಟಕಗಳಿದ್ದ ವಾಹನ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಭಾನುವಾರ ಬಿಳಿ ಬಣ್ಣದ ಇನೋವಾ ಕಾರನ್ನು ವಶಕ್ಕೆ ಪಡೆದಿದೆ.

ಫೆಬ್ರುವರಿ 25ರಂದು ಅಂಬಾನಿ ಅವರ ಮನೆ ಮುಂದೆ ಸ್ಫೋಟಕ ತುಂಬಿದ ಸ್ಕಾರ್ಪಿಯೋ ಕಾರು ಪತ್ತೆಯಾಗಿತ್ತು. ಅಂಬಾನಿ ಅವರ ಮನೆ ಮುಂದೆ ಕಾರನ್ನು ನಿಲುಗಡೆ ಮಾಡುವುದಕ್ಕೆ ಮುಂಚಿತವಾಗಿ, ಆ ಕಾರನ್ನು ಇನೋವಾ ಕಾರೊಂದು ಹಿಂಬಾಲಿಸುತ್ತಿತ್ತು. ಇದು ಅದೇ ಇನೋವಾ ಕಾರೇ ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಿಲ್ಲ.

‘ಈ ಪ್ರಕರಣದಡಿ ಮುಂಬೈ ಪೊಲೀಸ್‌ ಅಧಿಕಾರಿ ಸಚಿನ್ ವಾಜೆ ಅವರನ್ನು ಶನಿವಾರ ರಾತ್ರಿ ಬಂಧಿಸಲಾಗಿತ್ತು. ಇದರ ಬೆನ್ನಲ್ಲೇಆರ್‌ಟಿಒನ ನೋಂದಣಿ ಸಂಖ್ಯೆ ‘ಎಂಎಚ್ 01 A ಡ್ಎ 403’ ಇನೋವಾ ಕಾರನ್ನು ವಶಕ್ಕೆ ಪಡೆಯಲಾಗಿದೆ. ಈ ಕಾರಿನ ಹಿಂದೆ ಪೊಲೀಸ್‌ ಎಂದು ಬರೆಯಲಾಗಿತ್ತು. ಸದ್ಯ ಟೋಯಿಂಗ್‌ ವ್ಯಾನ್‌ ಸಹಾಯದಿಂದ ಕಾರನ್ನು ಪೆಡರ್‌ ರಸ್ತೆಯಲ್ಲಿರುವ ಎನ್‌ಐಎ ಕಚೇರಿಗೆ ಕರೆತರಲಾಗಿದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಅಂಬಾನಿ ಮನೆ ಮುಂದೆ ಪತ್ತೆಯಾದ ಸ್ಕಾರ್ಪಿಯೋ ಕಾರಿನ ಮಾಲೀಕ ಹಿರೇನ್ ಅವರ ಹತ್ಯೆ ಪ್ರಕರಣದ ಆರೋಪವನ್ನು ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ಸಚಿನ್‌ ವಾಜೆ ಅವರು ಎದುರಿಸುತ್ತಿದ್ದಾರೆ.

ಮಾರ್ಚ್‌ 5 ರಂದು ಠಾಣೆ ಜಿಲ್ಲೆಯಲ್ಲಿ ಹಿರೇನ್ ಅವರ ಮೃತ ದೇಹ ಪತ್ತೆಯಾಗಿತ್ತು. ಮಹಾರಾ‌ಷ್ಟ್ರದ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್‌) ಈ ಬಗ್ಗೆ ತನಿಖೆ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.