ADVERTISEMENT

Manipur Violence: ಇಂಫಾಲ ಕಣಿವೆಯ ಐದು ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿ

ಪಿಟಿಐ
Published 8 ಜೂನ್ 2025, 4:23 IST
Last Updated 8 ಜೂನ್ 2025, 4:23 IST
   

ಇಂಫಾಲ: ಮೈತೇ‌ಯಿ ಸಮುದಾಯದ ಅರಾಂಬಾಯಿ ತೆಂಗೋಲ್ ಸಂಘಟನೆಯ ನಾಯಕನನ್ನು ಬಂಧಿಸಲಾಗಿದೆ ಎಂಬ ವರದಿ ಬಳಿಕ ಶನಿವಾರ ತಡರಾತ್ರಿ ರಾಜ್ಯ ರಾಜಧಾನಿಯಲ್ಲಿ ತೀವ್ರ ಪ್ರತಿಭಟನೆಗಳು ನಡೆದಿವೆ. ಈ ಹಿನ್ನೆಲೆ ಇಂಫಾಲ ಕಣಿವೆಯ ಐದು ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಬಿಷ್ಣುಪುರ ಜಿಲ್ಲೆಯಲ್ಲಿ ಸಂಪೂರ್ಣ ಕರ್ಫ್ಯೂ ವಿಧಿಸಲಾಗಿದೆ. ತಮ್ಮ ನಾಯಕನ ಬಿಡುಗಡೆಗೆ ಒತ್ತಾಯಿಸಿದ ಪ್ರತಿಭಟನಾಕಾರರು, ಕ್ವಾಕಿಥೆಲ್ ಮತ್ತು ಉರಿಪೋಕ್‌ನಲ್ಲಿ ರಸ್ತೆ ಮಧ್ಯದಲ್ಲಿ ಟೈರ್‌ ಮತ್ತು ಹಳೆಯ ಪೀಠೋಪಕರಣಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾನುವಾರ ಬೆಳಿಗ್ಗೆಯೂ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ.

ರಾಜಭವನಕ್ಕೆ ಹೋಗುವ ರಸ್ತೆಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಕೇಂದ್ರ ಪಡೆಗಳ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ADVERTISEMENT

ಈಶಾನ್ಯ ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು, ಇಂಫಾಲ ಪಶ್ಚಿಮದ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶವೊಂದನ್ನು ಹೊರಡಿಸಿದ್ದಾರೆ. 'ಈ ಪ್ರದೇಶದಲ್ಲಿ ಅಶಾಂತಿ, ಸಾರ್ವಜನಿಕ ನೆಮ್ಮದಿಗೆ ಭಂಗ, ಗಲಭೆ ಅಥವಾ ಸಮಾಜ ವಿರೋಧಿ ಶಕ್ತಿಗಳ ಕಾನೂನುಬಾಹಿರ ಚಟುವಟಿಕೆಗಳಿಂದ ಜನರ ಜೀವಕ್ಕೆ ಮತ್ತು ಆಸ್ತಿಗಳಿಗೆ ಗಂಭೀರ ಅಪಾಯವಿದೆ' ಎಂದು ಅವರು ಹೇಳಿದ್ದಾರೆ ಎಂದು ವರದಿಯಾಗಿದೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಸೆಕ್ಷನ್ 163ರ ಉಪ-ವಿಭಾಗ 2ರ ಅಡಿಯಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ಜನ ಗುಂಪು ಸೇರುವುದನ್ನು, ಕಲ್ಲು, ಬಂದೂಕು ಅಥವಾ ಹರಿತವಾದ ಆಯುಧಗಳನ್ನು ಸಾಗಿಸುವುದನ್ನು ನಿಷೇಧಿಸಲಾಗಿದೆ.

ಬಿಎನ್‌ಎಸ್‌ಎಸ್‌ನ ಸೆಕ್ಷನ್ 163 ರ ಉಪ-ವಿಭಾಗ 1ರ ಅಡಿಯಲ್ಲಿ ಇಂಫಾಲ ಪೂರ್ವ ಜಿಲ್ಲೆಯಲ್ಲಿ, ಜೂನ್ 10ರಂದು ರಾತ್ರಿ 10ಗಂಟೆಯಿಂದ ಮುಂದಿನ ಆದೇಶದವರೆಗೆ ಜನರು ತಮ್ಮ ಮನೆಗಳಿಂದ ಹೊರ ಹೋಗದಂತೆ ನಿಷೇಧಿಸಲಾಗಿದೆ.

ಭದ್ರತಾ ಪಡೆಗಳೊಂದಿಗೆ ಘರ್ಷಣೆ:

ಶನಿವಾರ ರಾತ್ರಿ ರಾಜ್ಯ ರಾಜಧಾನಿಯ ವಿವಿಧ ಸ್ಥಳಗಳಲ್ಲಿ ಪ್ರತಿಭಟನಾಕಾರರು ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆಸಿದ್ದಾರೆ. ಇಂಫಾಲ ಪೂರ್ವ ಜಿಲ್ಲೆಯ ಖುರೈ ಲ್ಯಾಮ್ಲಾಂಗ್‌ನಲ್ಲಿ ಉದ್ರಿಕ್ತ ಗುಂಪು ಬಸ್‌ಗೆ ಬೆಂಕಿ ಹಚ್ಚಿದೆ. ಕ್ವಾಕಿಥೆಲ್‌ನಲ್ಲಿ ಗುಂಡು ಹಾರಿಸಿದ ಶಬ್ದ ಕೇಳಿಬಂದಿದೆ. ಆದರೆ ಗುಂಡು ಹಾರಿಸಿದವರು ಯಾರು ಎಂಬುವುದು ಇನ್ನೂ ತಿಳಿದು ಬಂದಿಲ್ಲ.

ಬಂಧಿತ ನಾಯಕನನ್ನು ರಾಜ್ಯದ ಹೊರಗೆ ಕರೆದೊಯ್ಯಲಾಗುವುದು ಎಂಬ ಅನಧಿಕೃತ ವರದಿಗಳು ಹರಡಿದ ಬೆನ್ನಲೇ ಪ್ರತಿಭಟನಾಕಾರರು ತುಲಿಹಾಲ್‌ನಲ್ಲಿರುವ ಇಂಫಾಲ ವಿಮಾನ ನಿಲ್ದಾಣದ ಪ್ರವೇಶ ದ್ವಾರಕ್ಕೂ ಮುತ್ತಿಗೆ ಹಾಕಿದ್ದಾರೆ. ಅಲ್ಲದೇ ಆತನನ್ನು ರಾಜ್ಯದ ಹೊರಗೆ ಕರೆದೊಯ್ಯುವ ಯಾವುದೇ ಸಂಭಾವ್ಯ ಪ್ರಯತ್ನವನ್ನು ತಡೆಯಲು ಅವರು ವಿಮಾನ ನಿಲ್ದಾಣ ರಸ್ತೆಯ ಮಧ್ಯದಲ್ಲಿಯೇ ಮಲಗಿದ್ದರು.

ಇನ್ನೂ ಹಲವಡೆ ತಮ್ಮ ನಾಯಕನ ಬಂಧನ ಖಂಡಿಸಿದ ಅರಾಂಬಾಯಿ ತೆಂಗೋಲ್ ಸಂಘಟನೆಯ ಸದಸ್ಯರು ತಮ್ಮ ಮೇಲೆ ಪೆಟ್ರೋಲ್ ಸುರಿದುಕೊಂಡು ಪ್ರತಿಭಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.