ADVERTISEMENT

ಉತ್ತರ ಪ್ರದೇಶದಲ್ಲಿ ‘ಗೂಂಡಾ ರಾಜ್ಯ’: ರಾಹುಲ್‌ ಟೀಕೆ

ಪಿಟಿಐ
Published 22 ಜುಲೈ 2020, 8:29 IST
Last Updated 22 ಜುಲೈ 2020, 8:29 IST
ವಿಕ್ರಂ ಜೋಶಿ
ವಿಕ್ರಂ ಜೋಶಿ   

ನವದೆಹಲಿ: ಪತ್ರಕರ್ತನ ಹತ್ಯೆಯ ಹಿನ್ನೆಲೆಯಲ್ಲಿ ಉತ್ತಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, ‘ಸರ್ಕಾರವು ಜನರಿಗೆ ‘ರಾಮ ರಾಜ್ಯ’ದ ಭರವಸೆ ನೀಡಿತ್ತು. ಆದರೆ ‘ಗೂಂಡಾ ರಾಜ್ಯ’ ಅನ್ನು ನೀಡಿದೆ’ ಎಂದಿದ್ದಾರೆ.

ತನ್ನ ಸೋದರ ಸೊಸೆಗೆಕೆಲವರು ಕಿರುಕುಳ ನೀಡುತ್ತಿದ್ದಾರೆ ಎಂದು ಗಾಜಿಯಾಬಾದ್‌ನ ಪತ್ರಕರ್ತ ವಿಕ್ರಂ ಜೋಶಿ ಅವರು ಜುಲೈ 16ರಂದು ಪೊಲೀಸರಿಗೆ ದೂರು ನೀಡಿದ್ದರು. ಸೋಮವಾರ ರಾತ್ರಿ ಅವರು ದ್ವಿಚಕ್ರ ವಾಹನದಲ್ಲಿ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದಾಗ ಅವರನ್ನು ತಡೆದ ಕೆಲವು ಕಿಡಿಗೇಡಿಗಳು, ಮಕ್ಕಳ ಸಮ್ಮುಖದಲ್ಲೇ ತಲೆಗೆ ಗುಂಡು ಹಾರಿಸಿದ್ದರು. ಬುಧವಾರ ಮುಂಜಾನೆ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

‘ಕಿರುಕುಳದ ವಿರುದ್ಧ ದೂರು ನೀಡಿದ ಕಾರಣಕ್ಕೆ ವಿಕ್ರಂ ಜೋಶಿ ಪ್ರಾಣ ಬಿಟ್ಟಿದ್ದಾರೆ. ಈ ಘಟನೆ ಖಂಡನಾರ್ಹ’ ಎಂದು ರಾಹುಲ್‌ ಟ್ವೀಟ್‌ನಲ್ಲಿ ಹೇಳಿದ್ದಾರೆ.

ADVERTISEMENT

ಘಟನೆಯನ್ನು ಖಂಡಿಸಿರುವ ಕಾಂಗ್ರೆಸ್‌ನ ಇನ್ನೊಬ್ಬ ಮುಖಂಡ ಅಹಮದ್‌ ಪಟೇಲ್‌, ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವುದಕ್ಕೆ ಇದು ಇನ್ನೊಂದು ಉದಾಹರಣೆ. ಆರು ವರ್ಷಗಳಿಂದ ಮಾಧ್ಯಮವನ್ನು ಹೇಗೆ ವ್ಯವಸ್ಥಿತವಾಗಿ ಬೆದರಿಸಲಾಗುತ್ತಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.