ADVERTISEMENT

ಸೈನಿಕರಂತೆ ರೈತರು ದೇಶಕ್ಕಾಗಿ ಹೋರಾಡುತ್ತಿದ್ದಾರೆ: ರಾಹುಲ್ ಗಾಂಧಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2024, 14:29 IST
Last Updated 15 ಫೆಬ್ರುವರಿ 2024, 14:29 IST
...
...   

ಔರಂಗಾಬಾದ್‌ : ಗಡಿಯಲ್ಲಿ ದೇಶ ಕಾಯುವ ಸೈನಿಕರಂತೆ, ಪ್ರತಿಭಟನಾನಿರತ ರೈತರು ಕೂಡ ದೇಶಕ್ಕಾಗಿ ಹೋರಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ತಿಳಿಸಿದರು. 

ಔರಂಗಾಬಾದ್‌ನಲ್ಲಿ ನಡೆಯುತ್ತಿರುವ ಭಾರತ್‌ ಜೋಡೋ ನ್ಯಾಯ ಯಾತ್ರೆಯಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು ನಡೆಸುತ್ತಿರುವ ‘ದೆಹಲಿ ಚಲೋ’ ಪ್ರತಿಭಟನಾ ಮೆರವಣಿಗೆಗೆ ಬೆಂಬಲ ವ್ಯಕ್ತಪಡಿಸಿದರು.

‘ಒಂದು ಸಮುದಾಯದ ವಿರುದ್ಧ ಇನ್ನೊಂದು ಸಮುದಾಯವನ್ನು ಎತ್ತಿಕಟ್ಟುವ ಮೂಲಕ ಮಣಿಪುರದಲ್ಲಿ ಬೆಂಕಿ ಹೊತ್ತಿಕೊಳ್ಳುವಂತೆ ಮಾಡಲಾಯಿತು. ಕಳೆದ ವರ್ಷದ ಮೇ ತಿಂಗಳಿನಿಂದ ಈಶಾನ್ಯ ರಾಜ್ಯಗಳು ಜನಾಂಗೀಯ ಕಲಹದಿಂದ ನಲುಗಿವೆ’ ಎಂದು  ಆರ್‌ಎಸ್‌ಎಸ್‌ ಮತ್ತು ಬಿಜೆಪಿ ವಿರುದ್ಧ ಕಿಡಿಕಾರಿದರು.

ADVERTISEMENT

‘ಶ್ರೀಮಂತರ ₹14 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿರುವ ಕೇಂದ್ರ ಸರ್ಕಾರ ನರೇಗಾಕ್ಕೆ ವೆಚ್ಚ ಮಾಡಿರುವುದು ಕೇವಲ ₹70,000 ಕೋಟಿ’ ಎಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗಣ್ಯರನ್ನು ಆಹ್ವಾನಿಸಿರುವುದಕ್ಕೆ ಸರ್ಕಾರವನ್ನು ಟೀಕಿಸಿದ ರಾಹುಲ್‌ ಗಾಂಧಿ, ‘ಕಾರ್ಯಕ್ರಮದಲ್ಲಿ ಬಡವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು’ ಎಂದಿದ್ದಾರೆ.

ಮುಂದುವರಿದ ನ್ಯಾಯ ಯಾತ್ರೆ:

ರಾಹುಲ್‌ ಗಾಂಧಿಯವರ ಭಾರತ್‌ ಜೋಡೋ ನ್ಯಾಯ ಯಾತ್ರೆಯು ಮುಂದುವರೆದಿದ್ದು, ಯಾತ್ರೆಯ ಭಾಗವಾಗಿ ಗುರುವಾರ ಔರಂಗಾಬಾದ್‌ನಲ್ಲಿ ಸಾರ್ವಜನಿಕ ಸಭೆ ನಡೆಯಿತು. 

‘ಶುಕ್ರವಾರ ಉತ್ತರಪ್ರದೇಶ ಗಡಿ ಸಮೀಪದ ಕೈಮುರ ಜಿಲ್ಲೆಗೆ ಯಾತ್ರೆ ಸಾಗಲಿದೆ’ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಪ್ರೇಮ್‌ ಚಂದ್ರ ಮಿಶ್ರಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.