ADVERTISEMENT

ಪ್ರವಾದಿಗೆ ರಾಜಾಸಿಂಗ್‌ ಅವಹೇಳನ ಆರೋಪ: ಹೈದರಾಬಾದ್‌ನಲ್ಲಿ ಮುಂದುವರಿದ ಹಿಂಸಾಚಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಆಗಸ್ಟ್ 2022, 4:57 IST
Last Updated 25 ಆಗಸ್ಟ್ 2022, 4:57 IST
ಹೈದರಾಬಾದ್‌ನಲ್ಲಿ ಪ್ರತಿಭಟನಾಕಾರರನ್ನು ಬಂಧಿಸುತ್ತಿರುವ ಪೊಲೀಸರು
ಹೈದರಾಬಾದ್‌ನಲ್ಲಿ ಪ್ರತಿಭಟನಾಕಾರರನ್ನು ಬಂಧಿಸುತ್ತಿರುವ ಪೊಲೀಸರು   

ಹೈದರಾಬಾದ್: ಪ್ರವಾದಿ ಮಹಮ್ಮದ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಬಂಧನಕ್ಕೊಳಗಾಗಿದ್ದ ರಾಜಾಸಿಂಗ್(ಬಿಜೆಪಿಯಿಂದ ಅಮಾನತುಗೊಂಡಿರುವ ಶಾಸಕ) ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿ ಹೈದರಾಬಾದ್‌ನ ಹಳೆ ನಗರ ಪ್ರದೇಶಗಳಲ್ಲಿ ಭಾರೀ ಪ್ರತಿಭಟನೆಗಳು ನಡೆದಿವೆ.

ರಾಜಾಸಿಂಗ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬುಧವಾರ ತಡರಾತ್ರಿ ಹೈದರಾಬಾದ್‌ನ ಕೆಲ ಪ್ರದೇಶಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ.

ಧಾರ್ಮಿಕ ಘೋಷಣೆಗಳನ್ನು ಕೂಗುತ್ತಿದ್ದ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದನ್ನು ತಡೆಯಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.

ADVERTISEMENT

ಚಾರ್‌ ಮಿನಾರ್‌ ಸೇರಿದಂತೆ ಹೈದರಾಬಾದ್‌ನ ಹಳೆಯ ನಗರ ಪ್ರದೇಶದ ಹಲವು ಸ್ಥಳಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ವರದಿಯಾಗಿವೆ.

ಪ್ರವಾದಿ ಕುರಿತು ಅವಹೇಳನ ಹೇಳಿಕೆ ನೀಡಿದ ಆರೋಪದಡಿ ರಾಜಾಸಿಂಗ್ ಅವರಿಗೆ ನೋಟಿಸ್ ನೀಡದೆ ಪೊಲೀಸರು ಬಂಧಿಸಿದ್ದರು. ಇದರಿಂದ ಕಾನೂನು ಸೂಕ್ತವಾಗಿ ಪರಿಪಾಲನೆಯಾಗಿಲ್ಲ ಎಂದು ಸಿಂಗ್ ಅವರ ವಕೀಲರು ಸ್ಥಳೀಯ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು. ಹಾಗಾಗಿ, ಸಿಂಗ್ ಅವರ ಬಿಡುಗಡೆಗೆ ಕೋರ್ಟ್ ಆದೇಶ ನೀಡಿತ್ತು.

ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮುಸ್ಲಿಮರು ರಾಜಾಸಿಂಗ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಹೈದರಾಬಾದ್ ನಗರ ಪೊಲೀಸ್ ಠಾಣೆಯಲ್ಲದೇ ಸಿಂಗ್ ಅವರ ವಿರುದ್ಧ ವಿವಿಧ ಠಾಣೆಗಳಲ್ಲೂ ದೂರುಗಳು ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.