ADVERTISEMENT

ಎಐಎಡಿಎಂಕೆ ಹಿಡಿತಕ್ಕಾಗಿ ನಿಲ್ಲದ ಪನ್ನೀರ್‌ಸೆಲ್ವಂ ಹೋರಾಟ 

ಪಿಟಿಐ
Published 28 ಜೂನ್ 2022, 13:52 IST
Last Updated 28 ಜೂನ್ 2022, 13:52 IST
ಪನ್ನೀರ್‌ಸೆಲ್ವಂ
ಪನ್ನೀರ್‌ಸೆಲ್ವಂ   

ಚೆನ್ನೈ: ತಮಿಳುನಾಡಿನ ಪ್ರಮುಖ ವಿರೋಧ ಪಕ್ಷ ಎಐಎಡಿಎಂಕೆಯಲ್ಲಿ ಪಕ್ಷದ ಮೇಲಿನ ಹಿಡಿತಕ್ಕಾಗಿ ಇಬ್ಬರು ನಾಯಕರ ನಡುವೆ ಆಂತರಿಕ ಕಚ್ಚಾಟ ಸುದೀರ್ಘಾವಧಿಗೆ ಮುಂದುವರಿಯುವ ಲಕ್ಷಣಗಳು ಕಾಣಿಸುತ್ತಿವೆ. ಪಕ್ಷದಲ್ಲಿ ಮೂಲೆಗುಂಪಾಗಿರುವ ನಾಯಕ ಒ. ಪನ್ನೀರ್‌ಸೆಲ್ವಂ (ಒಪಿಎಸ್‌) ಚುನಾವಣಾ ಆಯೋಗದ ಕದ ತಟ್ಟಿದ್ದು, ಮತ್ತೊಬ್ಬ ಪ್ರಭಾವಿ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ ಬಣವು ಪಕ್ಷದ ಹಿಡಿತ ಬಿಟ್ಟುಕೊಡದಿರಲು ಪಟ್ಟುಹಿಡಿದಿದೆ.

ಈ ಹೋರಾಟ ಹೀಗೆಯೇ ಮುಂದುವರಿದರೆ ಕಾಲಕ್ರಮೇಣ ಇದು ಆಡಳಿತರೂಢ ಡಿಎಂಕೆ ಮತ್ತು ಅದರ ಮಿತ್ರ ಪಕ್ಷಗಳಿಗೆ ಹೆಚ್ಚು ಅನುಕೂಲವಾಗಿ ಪರಿಣಮಿಸಬಹುದು. ಹಾಗೆಯೇ ಎಐಎಡಿಎಂಕೆ ಪರವಿರುವ ಮತಗಳು ಮತ್ತು ಡಿಎಂಕೆ ವಿರುದ್ಧವಿರುವ ಮತಗಳು ವಿಘಟನೆಯಾಗುವ ಸಾಧ್ಯತೆಯೂ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ವಿ.ಕೆ. ಶಶಿಕಲಾ ಅವರ ಸೋದರಳಿಯ ಟಿಟಿವಿ ದಿನಕರನ್‌ ನೇತೃತ್ವದ ಎಎಂಎಂಕೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷಕ್ಕೆ ಭಾರಿ ಪೆಟ್ಟು ನೀಡಿತ್ತು.

ADVERTISEMENT

ಒಪಿಎಸ್ ಅವರು ಚುನಾವಣಾ ಆಯೋಗಕ್ಕೆ ಇದೇ 27ರಂದು ಸಲ್ಲಿಸಿರುವ ಮನವಿ ಪತ್ರದಲ್ಲಿ ಇಪಿಎಸ್‌ಗೆ ಒಲವು ತೋರಲು ಅವರ ಬೆಂಬಲಿಗರು ಏಕ ನಾಯಕತ್ವದ ಬೇಡಿಕೆ ಪ್ರಸ್ತಾಪಿಸಿ,ಪಕ್ಷದ ಆಡಳಿತ ಹಾಳುಗೆಡವಲು ಪಕ್ಷದ ಬೈಲಾಗಳನ್ನು ಉಲ್ಲಂಘಿಸಿದ್ದಾರೆ ಎಂದು ವಾದಿಸಿದ್ದಾರೆ. ಬೈಲಾ ಪ್ರಕಾರ ಎಐಎಡಿಎಂಕೆಯ ಹಕ್ಕುಗಳ ರಕ್ಷಣೆಗೆ ಚುನಾವಣಾ ಆಯೋಗ ಮಧ್ಯಪ್ರವೇಶಿಸಬೇಕೆಂದು ಅವರು ಮೊರೆ ಹೋಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.