ADVERTISEMENT

ಪಾಂಗಾಂಗ್‌ ಸರೋವರದ ಬಳಿ ಚೀನಾ ಸೇನೆಯಿಂದ ಮತ್ತೆ ಯಥಾಸ್ಥಿತಿ ಉಲ್ಲಂಘನೆ: ಭಾರತ

ಏಜೆನ್ಸೀಸ್
Published 31 ಆಗಸ್ಟ್ 2020, 8:00 IST
Last Updated 31 ಆಗಸ್ಟ್ 2020, 8:00 IST
ಪಾಂಗಾಂಗ್‌ ತ್ಸೋ ಸರೋವರ (ಎಎಫ್‌ಪಿ ಚಿತ್ರ)
ಪಾಂಗಾಂಗ್‌ ತ್ಸೋ ಸರೋವರ (ಎಎಫ್‌ಪಿ ಚಿತ್ರ)   

ನವದೆಹಲಿ: ಪೂರ್ವ ಲಡಾಖ್ ನಲ್ಲಿ ಪಾಂಗಾಂಗ್ ಲೇಕ್ ಭೂಭಾಗದ ವಸ್ತುಸ್ಥಿತಿ ಬದಲಿಸುವ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ (ಪಿಎಲ್ಎ) ಮತ್ತೊಂದು ಯತ್ನವನ್ನು ಭಾರತೀಯ ಸೇನೆಯ ಯೋಧರು ವಿಫಲಗೊಳಿಸಿದ್ದಾರೆ.

ಅಪ್ರಚೋದಿತವಾಗಿ ಪಿಎಲ್ಎ ಇಂಥ ಕಾರ್ಯಕ್ಕೆ ಮುಂದಾಗಿತ್ತು ಎಂದು ಭಾರತೀಯ ಸೇನೆ ಸೋಮವಾರ ತಿಳಿಸಿದೆ. ಸೇನೆಯ ವಕ್ತಾರ ಕರ್ನಲ್ ಅಮನ್ ಆನಂದ್ ಅವರು, ಪಿಎಲ್ಎ ಈ ಮೂಲಕ ಸೇನೆ ಮತ್ತು ರಾಜತಾಂತ್ರಿಕ ಹಂತದಲ್ಲಿ ಹಿಂದೆ ಆಗಿದ್ದ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ತಿಳಿಸಿದ್ದಾರೆ.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸುವ ಕ್ರಮವಾಗಿ ಬ್ರಿಗೇಡ್ ಕಮಾಂಡರ್ ಹಂತದ ಅಧಿಕಾರಿಗಳ ನಡುವೆ ಚುಶುಲ್ ನಲ್ಲಿ ಈ ಮಾತುಕತೆ ನಡೆಯುತ್ತಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ADVERTISEMENT

ಆಗಸ್ಟ್ 29, 30ರ ರಾತ್ರಿ ಪಿಎಲ್ಎ ತುಕಡಿಗಳು ಮಿಲಿಟರಿ ಹಂತದ ಒಪ್ಪಂದವನ್ನು ಉಲ್ಲಂಘಿಸಿವೆ. ಭಾರತೀಯ ಸೇನೆ ಇದನ್ನು ವಿಫಲಗೊಳಿಸಿದ್ದು, ಆ ಭಾಗದಲ್ಲಿ ಭದ್ರತೆ ಚುರುಕುಗೊಳಿಸಿವೆ. ಭಾರತೀಯ ಸೇನೆಯು ಶಾಂತಿ ರಕ್ಷಣೆ ಮತ್ತು ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳಲು ಬದ್ಧವಾಗಿದೆ ಎಂದು ಭಾರತೀಯ ಸೇನೆ ವಕ್ತಾರರು ತಿಳಿಸಿದ್ದಾರೆ.

ಗಾಲ್ವಾನ್ ಕಣಿವೆ ಭಾಗದಲ್ಲಿ ಜೂನ್ 15ರಂದು ನಡೆದಿದ್ದ ಘರ್ಷಣೆಯ ಬಳಿಕ ಉಭಯ ರಾಷ್ಟ್ರಗಳ ಸೇನೆಯ ನಡುವೆ ಗಡಿಯಲ್ಲಿ ನಡೆದಿರುವ ಪ್ರಮುಖ ಘಟನೆ ಇದಾಗಿದೆ. ಜೂನ್ 15ರಂದು ಭಾರತೀಯ ಸೇನೆಯ 20 ಯೋಧರು ಮೃತಪಟ್ಟಿದ್ದರು. ಆಗಿನ ಘಟನೆಯಲ್ಲಿ ಚೀನಾ ಸೇನೆಯೂ ಪರಿಣಾಮ ಎದುರಿಸಿದೆ. ಆದರೆ, ಅದರ ವಿವರಗಳನ್ನು ಚೀನಾ ಇನ್ನು ಬಹಿರಂಗಪಡಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.