ನವದೆಹಲಿ: ಮತಗಳ್ಳತನದ ಕುರಿತು ಚುನಾವಣಾ ಆಯೋಗದ ವಿರುದ್ಧ ಅಭಿಯಾನ ಮುಂದುವರಿಸಿರುವ ಕಾಂಗ್ರೆಸ್ ಪಕ್ಷ, ‘ಲಾಪತಾ ವೋಟ್’ ಹೆಸರಿನ ಹೊಸ ವಿಡಿಯೊವನ್ನು ಶನಿವಾರ ಬಿಡುಗಡೆಗೊಳಿಸಿದೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಬಿಡುಗಡೆಗೊಳಿಸಿದ ವಿಡಿಯೊದಲ್ಲಿ ‘ಚೋರಿ ಚೋರಿ ಚುಪ್ಕೆ, ಚುಪ್ಕೆ... ಜನರು ಎಚ್ಚೆತ್ತುಕೊಂಡಿದ್ದಾರೆ’ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಅಧಿಕೃತ ಖಾತೆಯಲ್ಲೂ ಈ ವಿಡಿಯೊ ಹಂಚಿಕೊಂಡಿದ್ದು, ‘ನಿಮ್ಮ ಮತ ಕದಿಯುವುದೆಂದರೆ, ನಿಮ್ಮ ಹಕ್ಕುಗಳನ್ನು ಕಸಿದುಕೊಂಡಂತೆ’ ಎಂದು ತಿಳಿಸಿದೆ. ‘ಮತಗಳ್ಳತನದ ಕುರಿತು ಎಲ್ಲರೂ ಸಂಘಟಿತರಾಗಿ ಧ್ವನಿಯೆತ್ತೋಣ. ಆ ಮೂಲಕ ನಮ್ಮ ಹಕ್ಕುಗಳನ್ನು ಉಳಿಸೋಣ’ ಎಂದು ಹೇಳಿದೆ.
ವಿಡಿಯೊದಲ್ಲೇನಿದೆ?
ಪೊಲೀಸ್ ಠಾಣೆಗೆ ಭೇಟಿ ನೀಡಿದ ವ್ಯಕ್ತಿಯೊಬ್ಬರು, ಕಳ್ಳತನವಾಗಿದೆ ಎಂದು ದೂರುತ್ತಾನೆ. ಏನು ಕಳ್ಳತನ? ಎಂದು ಅಧಿಕಾರಿಗಳು ಪ್ರಶ್ನಿಸಿದ ವೇಳೆ, ‘ನನ್ನ ಮತಗಳ್ಳತನವಾಗಿದ್ದು, ಅದೇ ರೀತಿ, ಲಕ್ಷಾಂತರ ಮತಗಳ್ಳತನವಾಗಿದೆ’ ಎಂದು ಅಧಿಕಾರಿಗಳ ಮುಂದೆ ದೂರುತ್ತಾನೆ. ಆಗ ಪೊಲೀಸ್ ಅಧಿಕಾರಿಗಳು, ‘ಮತವನ್ನು ಕಳ್ಳತನ ಮಾಡಲಾಗಿದೆಯೇ ?’ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಒಂದು ನಿಮಿಷದ ವಿಡಿಯೊ ತುಣುಕಿಗೆ ‘ಲಾಪತಾ ವೋಟ್’ ಎಂದು ಹೆಸರಿಡಲಾಗಿದ್ದು, ಕಿರಣ್ ರಾವ್ ನಿರ್ದೇಶನದ ‘ಲಾಪತಾ ಲೇಡಿಸ್’ ಸಿನಿಮಾದ ಶೀರ್ಷಿಕೆಯ ಮೊದಲಾರ್ಧವನ್ನು ಬಳಸಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.