ADVERTISEMENT

ಪುಲ್ವಾಮ ದಾಳಿ: ಗುಪ್ತಚರ ವೈಫಲ್ಯದ ವಿವರಗಳು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2019, 14:43 IST
Last Updated 18 ಫೆಬ್ರುವರಿ 2019, 14:43 IST
   

ಪುಲ್ವಾಮ ದಾಳಿ ಮತ್ತೊಮ್ಮೆ ಭಾರತೀಯ ಗುಪ್ತಚರ ವಿಭಾಗ ಕ್ಷಮತೆಯ ಕುರಿತಂತೆ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಜಮ್ಮು-ಕಾಶ್ಮೀರ ರಾಜ್ಯಪಾಲ ಸತ್ಯ ಮಲಿಕ್ ಕೂಡಾ ಪುಲ್ವಾಮ ದಾಳಿಯಲ್ಲಿ ಗುಪ್ತಚರ ವೈಫಲ್ಯದ ಪಾತ್ರವೂ ಇದೆ ಎಂದು ಹೇಳಿದ್ದಾರೆ. ಆದರೆ ಜಮ್ಮು-ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿರುವ ಗುಪ್ತಚರ ವಿಭಾಗ ಈ ವಾದವನ್ನು ಒಪ್ಪುತ್ತಿಲ್ಲ. '2017ರಿಂದ ಈಚೆಗೆ ಯಾವ ದೊಡ್ಡ ದಾಳಿಯೂ ನಡೆದಿಲ್ಲ ಎಂಬುದೇ ನಮ್ಮ ಕ್ಷಮತೆಗೆ ಸಾಕ್ಷಿ ಎನ್ನುತ್ತಿದೆ'. ಈ ವಾದಗಳನ್ನು ಮೀರಿಯೂ ಕೆಲವು ಪ್ರಶ್ನೆಗಳು ಉಳಿಯುತ್ತಿವೆ.

ಭಾರೀ ಪ್ರಮಾಣದ ಸ್ಫೋಟಕಗಳು ಹೇಗೆ ಬಂದವು?
ಪುಲ್ವಾಮ ಆತ್ಮಹತ್ಯಾದಾಳಿಯ ಹಿಂದೆಯೇ ಹುಟ್ಟಿದ ಪ್ರಶ್ನೆ ಇದು. 78 ವಾಹನಗಳಲ್ಲಿ 2547 ಸಿಆರ್‌ಪಿಎಫ್ ಯೋಧರು ಸಂಚರಿಸುತ್ತಿದ್ದಾಗ ಜಮ್ಮು-ಕಾಶ್ಮೀರ ಹೆದ್ದಾರಿಯ ಅವಂತಿಪೊರದ ಬಳಿ ದಾಳಿ ನಡೆಯಿತು. 350 ಕಿಲೋಗ್ರಾಂನಷ್ಟು ಸ್ಫೋಟಕಗಳಿಂದ ಸ್ಕಾರ್ಪಿಯೋವನ್ನು ನುಗ್ಗಿಸುವ ಮೂಲಕ ಜೈಷ್ ದಾಳಿಕೋರ 40ಕ್ಕೂ ಹೆಚ್ಚು ಮಂದಿ ಹುತಾತ್ಮರಾಗಲು ಕಾರಣನಾದ.

ಭಾರೀ ಪ್ರಮಾಣದ ಹಿಮಪಾತದ ಕಾರಣದಿಂದ ಜಮ್ಮು-ಕಾಶ್ಮೀರ ಹೆದ್ದಾರಿ ಮುಚ್ಚಿತ್ತು. ಇದು ಇತ್ತೀಚೆಗಷ್ಟೇ ವಾಹನ ಸಂಚಾರಕ್ಕೆ ಮುಕ್ತವಾಗಿತ್ತು. ಒಂದೇ ದಿನದಲ್ಲಿ ದೊಡ್ಡ ಪ್ರಮಾಣದ ಸ್ಫೋಟಕಗಳನ್ನು ಭದ್ರತಾಪಡೆಗಳ ಕಣ್ಣುತಪ್ಪಿಸಿ ದಾಳಿಯ ಸ್ಥಳಕ್ಕೆ ತರಲು ಸಾಧ್ಯವಾದದ್ದು ಹೇಗೆ ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಸ್ಫೋಟವನ್ನು ವಿಶ್ಲೇಷಿಸಿರುವ ಭದ್ರತಾಪಡೆಗಳು ಸ್ಫೋಟಕದ ಪ್ರಮಾಣ 350 ಕಿಲೋಗ್ರಾಂಗಳಷ್ಟು ಇರಲು ಸಾಧ್ಯವಿಲ್ಲ. ಇದು 100 ಕಿಲೋಗ್ರಾಂಗಳ ಆಸುಪಾಸಿನಲ್ಲಿ ಇರಬಹುದು ಎನ್ನುತ್ತಿವೆ. ಆದರೂ ಒಂದು ಕ್ವಿಂಟಲ್‌ನಷ್ಟು ಸುಧಾರಿತ ಸ್ಫೋಟಕವನ್ನು ಹೇಗೆ ಭದ್ರತಾಪಡೆಗಳ ಕಣ್ಣು ತಪ್ಪಿಸಿ ತರಲಾಯಿತು ಎಂಬ ಪ್ರಶ್ನೆ ಹಾಗೆಯೇ ಉಳಿಯುತ್ತದೆ.

ADVERTISEMENT
ಸ್ಫೋಟದ ತೀವ್ರತೆಗೆ ಛಿದ್ರಗೊಂಡಿರುವ ಬಸ್‌ –ರಾಯಿಟರ್ಸ್‌ ಚಿತ್ರ

ಈ ಯೋಜನೆಯ ಮುನ್ಸೂಚನೆ ಏಕೆ ಸಿಗಲಿಲ್ಲ?
ಗುರುವಾರದ ದಾಳಿಯನ್ನು ಇದ್ದಕ್ಕಿದ್ದಂತೆಯೇ ಯೋಜಿಸಲು ಸಾಧ್ಯವಿಲ್ಲ. ಇದಕ್ಕೆ ತಿಂಗಳುಗಳ ಪ್ರಯತ್ನ ಬೇಕಿಲ್ಲವಾದರೂ ಕನಿಷ್ಠ ವಾರಗಳ ಸಿದ್ಧತೆಯಾದರೂ ಬೇಕು. ಅಷ್ಟೇ ಅಲ್ಲ ಈ ಬಗೆಯ ದಾಳಿಯನ್ನು ನಡೆಸುವವರಿಗೆ ತರಬೇತಿಯ ಅಗತ್ಯವೂ ಇದೆ. ಇದೆಲ್ಲಾ ನಡೆಯುತ್ತಿರುವುದರ ಸುಳಿವೂ ಗುಪ್ತಚರ ವಿಭಾಗಕ್ಕೆ ದೊರೆಯದೇ ಹೋದದ್ದು ಹೇಗೆ?

ಜಮ್ಮ-ಕಾಶ್ಮೀರದಲ್ಲಿ ಕೇಂದ್ರೀಯ ಸಶಸ್ತ್ರ ಮೀಸಲು ಪಡೆಯಿಂದ ತೊಡಗಿ ಹಲವು ಬಗೆಯ ಭದ್ರತಾ ಪಡೆಗಳು ಮತ್ತು ಅವುಗಳ ಗುಪ್ತಚರ ವಿಭಾಗಗಳು ಕೆಲಸ ಮಾಡುತ್ತಿವೆ. ಎಲ್ಲದಕ್ಕಿಂತ ಹೆಚ್ಚಾಗಿ ಕಾಶ್ಮೀರದಲ್ಲಿ ಇಂಥ ಸ್ಫೋಟಗಳನ್ನು ನಡೆಸಲು ನೆರೆಯ ದೇಶದ ಬೆಂಬಲವಿದೆ ಎಂಬುದು ಎಲ್ಲರಿಗೂ ಗೊತ್ತು. ಇಷ್ಟಾಗಿಯೂ ಗುಪ್ತಚರ ವಿಭಾಗಗಳು ಈ ವಿಷಯದಲ್ಲಿ ಮೋಸ ಹೋಗಲು ಸಾಧ್ಯವೇ ಎಂಬುದೂ ಒಂದು ಯಕ್ಷಪ್ರಶ್ನೆಯೇ ಸರಿ.

ಆತ್ಮಹತ್ಯಾ ಬಾಂಬರ್ ಸ್ಥಳೀಯ
ದಾಳಿ ನಡೆದ ಕೆಲವೇ ಕ್ಷಣಗಳಲ್ಲಿ ದಾಳಿ ನಡೆಸಿದವನ ವಿಡಿಯೋ ಪ್ರತ್ಯಕ್ಷವಾಯಿತು. ಆದಿಲ್ ಅಹಮದ್ ದರ್ ಎಂಬ ಹೆಸರಿನ ಈತ ತಾನು ಆರು ತಿಂಗಳ ಅವಧಿಯ ತರಬೇತಿ ಪಡೆದಿರುವುದಾಗಿಯೂ ಅದರಲ್ಲಿ ಹೇಳಿದ್ದಾನೆ. ಈತ ಪಾಕಿಸ್ತಾನಿಯೋ ಅಥವಾ ಪಾಕ್ ಆಕ್ರಮಿತ ಕಾಶ್ಮೀರದ ನಿವಾಸಿಯೋ ಅಲ್ಲ. ಇವನು ಗುಪ್ತಚರ ವಿಭಾಗದ ಕಣ್ಣಿಗೆ ಬೀಳದಂತೆ ತರಬೇತಿ ಪಡೆಯಲು ಹೇಗೆ ಸಾಧ್ಯವಾಯಿತು. ಇದಕ್ಕಿಂತ ದೊಡ್ಡ ಪ್ರಶ್ನೆಯೆಂದರೆ ಜಮ್ಮು-ಕಾಶ್ಮೀರದ ರಾಜ್ಯಪಾಲರೇ ಹೇಳಿರುವಂತೆ ಗುಪ್ತಚರ ವಿಭಾಗ ಈತನ ಮೇಲೆ ಕಣ್ಣಿರಿಸಿತ್ತು. ಇಷ್ಟಾಗಿಯೂ ಅವನು ತರಬೇತಿ ಪಡೆದು ದಾಳಿಗೆ ಬಂದದ್ದೇಕೆ ತಿಳಿಯಲಿಲ್ಲ?

ಪುಲ್ವಾಮಾ ದಾಳಿಯನ್ನು ಖಂಡಿಸಿ ಜಮ್ಮುವಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರು ಪಾಕಿಸ್ತಾನ ವಿರುದ್ಧ ಘೋಷಣೆಗಳನ್ನು ಕೂಗಿದರು

ದಾಳಿಯ ಸ್ವರೂಪ ಇನ್ನೂ ಸ್ಪಷ್ಟವಾಗಿಲ್ಲ
ದಾಳಿ ನಡೆದು ಒಂದು ಕಳೆದ ನಂತರವೂ ದಾಳಿಯ ಸ್ವರೂಪವನ್ನು ವಿವರಿಸುವಲ್ಲಿ ಭಾರತೀಯ ಭದ್ರತಾ ಪಡೆಗಳು ಸೋಲುತ್ತಿವೆ. ಮೊದಲು ಗ್ರೆನೇಡ್ ದಾಳಿ ನಡೆಯಿತು ಆಮೇಲೆ ಬಾಂಬರ್ ಇದ್ದ ವಾಹನ ನುಗ್ಗಿ ಬಂದು ಸ್ಫೋಟಿಸಿತು ಎಂಬ ಆರಂಭಿಕ ಮಾಹಿತಿಯಿತ್ತು. ಆದರೆ ಈಗ ಭದ್ರತಾಪಡೆಗಳು ಸ್ಫೋಟ ಸಂಭವಿಸಿದ್ದು ಹೀಗಲ್ಲ ಎನ್ನುತ್ತಿವೆ. ಆತ್ಮಹತ್ಯಾ ಬಾಂಬರ್ ಇದ್ದ ವಾಹನ ಸಿಆರ್‌ಪಿಎಫ್ ವಾಹನಕ್ಕೆ ಬಂದು ಡಿಕ್ಕಿ ಹೊಡೆಯಿತೇ ಅಥವಾ ಮಧ್ಯ ನುಗ್ಗಿ ಬಂದು ಸ್ಫೋಟಿಸಿತೇ ಎಂಬ ವಿಷಯವೇ ಇನ್ನೂ ಸ್ಪಷ್ಟವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.