ADVERTISEMENT

ಪತಿ ಬದುಕಿಸಲು ಯಕೃತ್ ದಾನ ಮಾಡಿದ ಪತ್ನಿ: ಶಸ್ತ್ರಚಿಕಿತ್ಸೆ ಬಳಿಕ ಇಬ್ಬರೂ ಸಾವು

ಪಿಟಿಐ
Published 25 ಆಗಸ್ಟ್ 2025, 6:08 IST
Last Updated 25 ಆಗಸ್ಟ್ 2025, 6:08 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಪುಣೆ: ಪತಿಯನ್ನು ಉಳಿಸಿಕೊಳ್ಳಬೇಕೆಂದು ಪತ್ನಿ ತನ್ನ ಯಕೃತ್‌ನ ಒಂದು ಭಾಗವನ್ನು ದಾನ ಮಾಡಿದ್ದರು. ಆದರೆ ಕಸಿ ಶಸ್ತ್ರಚಿಕಿತ್ಸೆ ಬಳಿಕ ಪತಿ ಮೃತಪಟ್ಟಿದ್ದು, ಕೆಲ ದಿನಗಳ ಬಳಿಕ ಅಂಗ ದಾನ ಮಾಡಿದ್ದ ಪತ್ನಿಯೂ ಮೃತಪಟ್ಟಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಆರೋಗ್ಯ ಇಲಾಖೆ ಪುಣೆಯ ಖಾಸಗಿ ಆಸ್ಪತ್ರೆಯೊಂದಕ್ಕೆ ನೊಟೀಸ್‌ ನೀಡಿದೆ. 

ಬಾಪು ಕುಮಾರ್‌ ಎನ್ನುವವರಿಗೆ ಅವರ ಪತ್ನಿ ಕಾಮಿನಿ ಯಕೃತ್‌ ದಾನ ಮಾಡಿದ್ದರು. ಆ.15ರಂದು ಕುಮಾರ್ ಅವರಿಗೆ ಶಸ್ತ್ರಚಿಕಿತ್ಸೆ ನಡೆದಿದ್ದು, ಆ.17ರಂದು ಅವರು ಮೃತಪಟ್ಟಿದ್ದರು. ಆ.21ರ ಹೊತ್ತಿಗೆ ಕಾಮಿನಿ ಅವರಿಗೆ ಯಕೃತ್‌ನಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಇದಕ್ಕೆ ಚಿಕಿತ್ಸೆ ಪಡೆಯುವ ವೇಳೆ ಅವರೂ ಮೃತಪಟ್ಟಿದ್ದಾರೆ. ಇದರಿಂದಾಗಿ ನೊಂದ ಕುಟುಂಬ ಆಸ್ಪತ್ರೆಯ ನಿರ್ಲಕ್ಷದಿಂದಲೇ ಇಬ್ಬರೂ ಮೃತಪಟ್ಟಿದ್ದಾರೆ ಎಂದು ದೂರಿದ್ದು, ತನಿಖೆಗೆ ಆಗ್ರಹಿಸಿದ್ದಾರೆ.

ADVERTISEMENT

ಕುಟುಂಬಸ್ಥರ ದೂರಿನ ಅನ್ವಯ ಆರೋಗ್ಯ ಇಲಾಖೆ ಆಸ್ಪತ್ರೆಗೆ ನೋಟೀಸ್‌ ನೀಡಿದ್ದು, ಕಸಿ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಒದಗಿಸುವಂತೆ ನಿರ್ದೇಶಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಆಸ್ಪತ್ರೆ, ‘ನಾವು ತನಿಖೆಗೆ ಸಂಪೂರ್ಣವಾಗಿ ಸಹಕಾರ ನೀಡುತ್ತೇವೆ. ಪ್ರಮಾಣಿತ ವೈದ್ಯಕೀಯ ಶಿಷ್ಟಾಚಾರಗಳ ಪ್ರಕಾರ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ. ಅಲ್ಲದೆ ಬಾಪು ಕುಮಾರ್‌ ಅವರಿಗೆ ಹಲವು ರೀತಿಯ ಅರೋಗ್ಯ ಸಮಸ್ಯೆಗಳಿತ್ತು. ಚಿಕಿತ್ಸೆಯ ಬಳಿಕ ಅವರಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಇನ್ನು ಕಾಮಿನಿ ಅವರು ಚಿಕಿತ್ಸೆ ಬಳಿಕ ಉತ್ತಮವಾಗಿಯೇ ಚೇತರಿಸಿಕೊಂಡಿದ್ದರು. ಆದರೆ ಕೆಲವು ದಿನಗಳ ಬಳಿಕ ಸೋಂಕು ಹಾಗೂ ಬಹು ಅಂಗಾಂಗ ವೈಫಲ್ಯ ಕಾಣಿಸಿಕೊಂಡಿದೆ. ಇದನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಬಾಪು ಕುಮಾರ್‌ ಅವರ ಕುಟುಂಬಕ್ಕಾದ ನಷ್ಟಕ್ಕೆ ವಿಷಾದಿಸುತ್ತೇವೆ’ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.