ಸಾಂದರ್ಭಿಕ ಚಿತ್ರ
– ಐಸ್ಟಾಕ್ ಚಿತ್ರ
ಚಂಡೀಗಢ: ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ಉದ್ಯಮಿ ಅನೋಖ್ ಮಿತ್ತಲ್ ಹಾಗೂ ಅವರ ಪತ್ನಿಯ ಮೇಲೆ ಶಸ್ತ್ರಸಜ್ಜಿತ ದರೋಡೆಕೋರರ ಗುಂಪು ಶನಿವಾರ ದಾಳಿ ಮಾಡಿದೆ. ಈ ವೇಳೆ, ಮಿತ್ತಲ್ ಅವರ ಪತ್ನಿ ಹತ್ಯೆಯಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಡೆಹ್ಲೊದಲ್ಲಿ ರಾತ್ರಿ ಊಟ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ಮಿತ್ತಲ್ ಹಾಗೂ ಅವರ ಪತ್ನಿ ಲಿಪ್ಸಿ ಅವರ ಕಾರನ್ನು ರೂರ್ಕಾ ಗ್ರಾಮದ ಸಿಧ್ವಾನ್ ಕಾಲುವೆ ಬಳಿ ತಡೆದ ಐವರು ದರೋಡೆಕೋರರು, ಬಳಿಕ ಹರಿತವಾದ ಆಯುಧಗಳಿಂದ ದಂಪತಿಯ ಮೇಲೆ ದಾಳಿ ನಡೆಸಿದ್ದಾರೆ. ಲಿಪ್ಸಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಮಿತ್ತಲ್ ಅವರಿಗೆ ಡಿಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದಾಳಿಕೋರರು, ಕೃತ್ಯದ ಬಳಿಕ ಮಿತ್ತಲ್ ಅವರ ಕಾರಿನೊಂದಿಗೆ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
'ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದೇವೆ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮಿತ್ತಲ್ ಅವರು ಶಾಸಕ ಅಶೋಕ್ ಪರಷಾರ್ ಪಪ್ಪಿ ಅವರ ಮೂಲಕ ನಾಲ್ಕು ತಿಂಗಳ ಹಿಂದಷ್ಟೇ ಎಎಪಿ ಸೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.