ADVERTISEMENT

ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ರಾಜೀನಾಮೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಸೆಪ್ಟೆಂಬರ್ 2021, 18:15 IST
Last Updated 18 ಸೆಪ್ಟೆಂಬರ್ 2021, 18:15 IST
ಅಮರೀಂದರ್ ಸಿಂಗ್
ಅಮರೀಂದರ್ ಸಿಂಗ್   

ಚಂಡೀಗಡ : ಪಂಜಾಬ್‌ ಕಾಂಗ್ರೆಸ್‌ನ ಹಿರಿಯ ನಾಯಕ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಶನಿವಾರ ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ರಾಜ್ಯ ಕಾಂಗ್ರೆಸ್‌ನಲ್ಲಿ ಹಲವು ತಿಂಗಳಿನಿಂದ ನಡೆಯುತ್ತಿದ್ದ ನಾಯಕತ್ವ ಸಂಘರ್ಷಕ್ಕೆ ಅವರು ಈ ಮೂಲಕ ತೆರೆ ಎಳೆದಿದ್ದಾರೆ.

'ನಮ್ಮ ತಂದೆ ಇಂದುರಾಜೀನಾಮೆ ನೀಡಲಿದ್ದಾರೆ' ಎಂದು ಅಮರಿಂದರ್ ಅವರ ಪುತ್ರ ಶನಿವಾರ ಮಧ್ಯಾಹ್ನ ಟ್ವೀಟ್ ಮಾಡಿದ್ದರು. ಅಂತೆಯೇ ಅಮರಿಂದರ್ ಸಿಂಗ್ ಅವರು ರಾಜಭವನಕ್ಕೆ ತೆರಳಿ, ಸಂಜೆ ರಾಜ್ಯಪಾಲರಿಗೆ ರಾಜೀನಾಮೆ ನೀಡಿದರು. ಪಂಜಾಬ್‌ ವಿಧಾನಸಭೆಗೆ ನಾಲ್ಕೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ.

ADVERTISEMENT

ಶನಿವಾರ ಸಂಜೆ 5 ಗಂಟೆಗೆ ನಡೆಯಬೇಕಿದ್ದ ಕಾಂಗ್ರೆಸ್ ಶಾಸಕಾಂಗ ಸಭೆಗೆ ಕೆಲವೇ ನಿಮಿಷಗಳ ಮೊದಲು ಅಮರಿಂದರ್ ರಾಜೀನಾಮೆ ಸಲ್ಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಅಧಿಕಾರದ ಸಂಬಂಧ ಪಕ್ಷವು ಮೂರು ಬಾರಿ ಶಾಸಕಾಂಗ ಸಭೆ ಕರೆದಿದೆ. ನನ್ನ ಮೇಲಿನ ಅಪನಂಬಿಕೆಯಿಂದಲೇ ಹೀಗೆ ಮಾಡಲಾಗಿದೆ. ನನಗೆ ಅವಮಾನವಾಗಿದೆ. ಹೀಗಾಗಿ ರಾಜೀನಾಮೆ ನೀಡಿದೆ' ಎಂದು ಅವರು ತೀವ್ರ ಬೇಸರ ವ್ಯಕ್ತಪಡಿಸಿದರು.

'ನನ್ನ ಮುಂದೆ ಸದಾ ಬೇರೆ ಆಯ್ಕೆ ಇತ್ತು. ಈಗ ಕಾಂಗ್ರೆಸ್‌ ಪಕ್ಷದಲ್ಲಿದ್ದೇನೆ. ಪಕ್ಷದಲ್ಲಿನ ನನ್ನ ಬೆಂಬಲಿಗರ ಜತೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದ್ದೇನೆ. ಬೇರೆ ಆಯ್ಕೆಯನ್ನು ಬಳಸಿಕೊಳ್ಳುವ ಸಂದರ್ಭ ಬಂದಾಗ ಅದನ್ನು ಬಳಸಿಕೊಳ್ಳುತ್ತೇನೆ' ಎಂದು ಹೇಳಿದರು.

ಆಯ್ಕೆ ಸೋನಿಯಾ ಅಂಗಳಕ್ಕೆ: ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇ ಪಂಜಾಬ್‌ನ ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಿ ಎಂದು ಪಂಜಾಬ್ ಕಾಂಗ್ರೆಸ್‌ ಶಾಸಕಾಂಗ ಪಕ್ಷವು ನಿರ್ಣಯ ಅಂಗೀಕರಿಸಿದೆ.

ಶನಿವಾರ ಸಂಜೆಗೆ ಪೂರ್ವನಿಗದಿಯಾಗಿದ್ದ ಸಭೆಯಲ್ಲಿ ಪಕ್ಷದ 78 ಶಾಸಕರು ಭಾಗಿಯಾಗಿದ್ದರು. ಇಬ್ಬರು ಶಾಸಕ ರಷ್ಟೇ ಗೈರುಹಾಜರಾಗಿದ್ದರು. ಮುಂದಿನ ಮುಖ್ಯಮಂತ್ರಿ ಆಯ್ಕೆಯನ್ನು ಸೋನಿಯಾ ಅವರೇ ಮಾಡಲಿ ಎಂದು ಸಭೆಯಲ್ಲಿದ್ದವರು ಅವಿರೋಧವಾಗಿ ನಿರ್ಣಯ ಅಂಗೀಕರಿಸಿದರು. ಅಮರಿಂದರ್ ಅವರ ಕಾರ್ಯವನ್ನು ಶ್ಲಾಘಿಸುವ ನಿರ್ಣಯವನ್ನೂ ಅವಿರೋಧವಾಗಿ ಅಂಗೀಕರಿಸಲಾಗಿದೆ.

ಪೂರ್ಣಾವಧಿ ಅಧ್ಯಕ್ಷರು ಬೇಕು: ತರೂರ್

ಕಾಂಗ್ರೆಸ್‌ಗೆ ಈಗ ಪೂರ್ಣಾವಧಿ ಅಧ್ಯಕ್ಷರ ಅವಶ್ಯಕತೆ ಇದೆ ಎಂದು ಪಕ್ಷದ ಸಂಸದ ಶಶಿ ತರೂರ್ ಪ್ರತಿಪಾದಿಸಿದ್ದಾರೆ.

‘ನಾವೆಲ್ಲರೂ ಸೋನಿಯಾ ಗಾಂಧಿ ಅವರ ನಾಯಕತ್ವವನ್ನು ಒಪ್ಪಿಕೊಳ್ಳುತ್ತೇವೆ. ಆದರೆ, ಈಗ ನಾವು ಮಧ್ಯಂತರ ಅಧ್ಯಕ್ಷರನ್ನು ಮಾತ್ರ ಹೊಂದಿದ್ದೇವೆ. ಎರಡು ವರ್ಷದಿಂದ ಪಕ್ಷಕ್ಕೆ ಪೂರ್ಣಾವಧಿ ಅಧ್ಯಕ್ಷರಿಲ್ಲ. ಪಕ್ಷಕ್ಕೆ ಚೈತನ್ಯ ತುಂಬಲು ಆ ಸ್ಥಾನಕ್ಕೆ ಪೂರ್ಣಾವಧಿ ಅಧ್ಯಕ್ಷರ ಅವಶ್ಯಕತೆ ಇದೆ. ಅದು ರಾಹುಲ್ ಗಾಂಧಿ ಅವರ ಅಧೀನದಲ್ಲೇ ಇದ್ದರೂ ಸರಿ. ಆದರೆ ಆ ಕೆಲಸ ಶೀಘ್ರವಾಗಿ ಆಗಬೇಕು’ ಎಂದು ಅವರು ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.