ADVERTISEMENT

ರೈತರ ಮೇಲಿನ ಹಲ್ಲೆ ಹಿನ್ನೆಲೆ: ಫೆ.2ರಂದು ಸರ್ವಪಕ್ಷಗಳ ಸಭೆ ಕರೆದ ಪಂಜಾಬ್ ಸಿಎಂ

ಒಗ್ಗಟ್ಟು ಪ್ರದರ್ಶಿಸಲು ಮನವಿ

ಪಿಟಿಐ
Published 31 ಜನವರಿ 2021, 9:41 IST
Last Updated 31 ಜನವರಿ 2021, 9:41 IST
ಅಮರಿಂದರ್ ಸಿಂಗ್
ಅಮರಿಂದರ್ ಸಿಂಗ್   

ಚಂಡೀಗಡ: ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿದ್ದ ಪಂಜಾಬ್ ರೈತರ ಮೇಲೆ ಪೊಲೀಸರು ಮತ್ತು ಗೂಂಡಾಗಳು ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ, ರೈತರೊಂದಿಗೆ ಒಗ್ಗಟ್ಟು ಪ್ರದರ್ಶಿಸುವುದಕ್ಕಾಗಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ಮಂಗಳವಾರ ಸರ್ವ ಪಕ್ಷಗಳ ಸಭೆ ಕರೆದಿದ್ದಾರೆ.

ನಗರದ ಪಂಜಾಬ್ ಭವನದಲ್ಲಿ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಸಭೆ ಕರೆಯಲಾಗಿದೆ ಎಂದು ಸರ್ಕಾರ ಭಾನುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

‘ಇದು ಪ್ರತಿಷ್ಠೆ ಪ್ರದರ್ಶಿಸುವ ಸಮಯವಲ್ಲ. ನಮ್ಮ ರಾಜ್ಯ ಮತ್ತು ನಮ್ಮ ಜನರನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಒಗ್ಗಟ್ಟು ಪ್ರದರ್ಶಿಸಬೇಕಿದೆ‘ ಎಂದು ಅಮರೀಂದರ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.

‘ಪಂಜಾಬ್‌ ರಾಜ್ಯದ ಹಿತ ದೃಷ್ಟಿಯಿಂದ, ರೈತರ ಪ್ರತಿಭಟನೆಗೆ ಬೆಂಬಲ ನಿಡುವ ಹಿನ್ನೆಲೆಯಲ್ಲಿ ಒಗ್ಗಟ್ಟು ಪ್ರದರ್ಶಿಸುವುದಕ್ಕಾಗಿ ಈ ಸಭೆಯಲ್ಲಿ ಎಲ್ಲರೂ ಭಾಗವಹಿಸುವಂತೆ ಅಮರೀಂದರ್ ಸಿಂಗ್ ಸರ್ವಪಕ್ಷಗಳಿಗೆ ಮನವಿ ಮಾಡಿದ್ದಾರೆ.

‘ದೆಹಲಿ ಗಡಿ ಭಾಗಗಳಲ್ಲಿ ಕಳೆದ ಎರಡು ತಿಂಗಳಿನಿಂದ ಜೀವ ಪಣಕ್ಕಿಟ್ಟು ಹೋರಾಟ ನಡೆಸುತ್ತಿದ್ದಾರೆ. ಅಂಥ ಪ್ರತಿಭಟನಕಾರರ ಮೇಲೆ ಪೊಲೀಸರು, ಗೂಂಡಾಗಳಿಂದ ಹಲ್ಲೆ ನಡೆಸಲಾಗುತ್ತಿದೆ. ಮೂಲ ಸೌಕರ್ಯವನ್ನು ಕಿತ್ತುಕೊಂಡು ಕಿರುಕುಳ ನೀಡಲಾಗುತ್ತಿದೆ‘ ಎಂದು ಸಿಎಂ ವಿವರಿಸಿದರು.

‘ಪಂಜಾಬ್‌ ನಾಗರಿಕರು, ಎಲ್ಲ ರಾಜಕೀಯ ಪಕ್ಷಗಳ ಒಗ್ಗಟ್ಟಿನ ಹೋರಾಟದಿಂದ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಎದುರಿಸಬಹುದು ಮತ್ತು ರೈತರನ್ನು ರಕ್ಷಿಸಬಹುದು‘ ಎಂದು ಸಿಂಗ್ ಹೇಳಿದರು.

ಸರ್ಕಾರದ ಮೂಲಗಳ ಪ್ರಕಾರ, ಸರ್ವಪಕ್ಷಗಳ ಸಭೆಯಲ್ಲಿ ಸಿಂಘು ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ವೇಳೆ, ರೈತರ ಮೇಲೆ ನಡೆದ ಹಲ್ಲೆ ಮತ್ತು ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನಗಳ ಕುರಿತು ಹಾಗೂ ಜ.26 ರಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ರ್‍ಯಾಲಿ ವೇಳೆ ನಡೆದ ಘಟನೆಗಳ ಕುರಿತು ಚರ್ಚೆ ನಡೆಯಲಿದೆ.

ಇದೇ ವೇಳೆ, ಎಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ರೈತರ ಹಿತ ದೃಷ್ಟಿಯಿಂದ ಸರ್ವ ಪಕ್ಷದ ಸದಸ್ಯರು ಸಭೆಯಲ್ಲಿ ಭಾಗವಹಿಸಿ, ಒಗ್ಗಟ್ಟು ಪ್ರದರ್ಶಿಸುವ ವಿಶ್ವಾಸವಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.