ADVERTISEMENT

ಪಂಜಾಬ್ ಸಚಿವ ಸಂಪುಟ ವಿಸ್ತರಣೆ: ನೂತನ ಸಚಿವರಾಗಿ 15 ಶಾಸಕರ ಪ್ರಮಾಣ ವಚನ

ಪಿಟಿಐ
Published 26 ಸೆಪ್ಟೆಂಬರ್ 2021, 17:00 IST
Last Updated 26 ಸೆಪ್ಟೆಂಬರ್ 2021, 17:00 IST
   

ಚಂಡೀಗಡ: ಪಂಜಾಬ್ ಸಚಿವ ಸಂಪುಟ ಭಾನುವಾರ ವಿಸ್ತರಣೆಯಾಗಿದ್ದು, ಏಳು ಮಂದಿ ಹೊಸಬರು ಸೇರಿದಂತೆ 15 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.

ರಣದೀಪ್‌ ಸಿಂಗ್ ನಭಾ, ರಾಜ್‌ಕುಮಾರ್ ವರ್ಕಾ, ಸಂಗರ್‌ ಸಿಂಗ್ ಗಿಲ್ಜಿಯಾನ್, ಪರ್ಗತ್ ಸಿಂಗ್, ಅಮರಿಂದರ್ ಸಿಂಗ್ ರಾಜಾ ಮತ್ತು ಗುರುಕೀರತ್ ಸಿಂಗ್ ಕೊಟ್ಲಿ ಅವರು ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರ ಸಚಿವ ಸಂಪುಟಕ್ಕೆ ಸೇರ್ಪಡೆಯಾದ ಹೊಸ ಮುಖಗಳು.

2018ರಲ್ಲಿ ಅಮರಿಂದರ್ ಸಿಂಗ್ ಸಂಪುಟಕ್ಕೆ ರಾಜೀನಾಮೆ ನೀಡಿದ್ದ ರಾಣಾ ಗುರ್ಜಿತ್ ಸಿಂಗ್ ಅವರು ಪುನರಾಗಮನ ಮಾಡಿದ್ದಾರೆ. ರಾಜ್ಯಪಾಲ ಬನ್ವಾರಿಲಾಲ್‌ ಪುರೋಹಿತ್ ಅವರು ಪ್ರಮಾಣವಚನ ಬೋಧಿಸಿದರು.

ADVERTISEMENT

ಅಮರಿಂದರ್ ಸಿಂಗ್ ನೇತೃತ್ವದ ಸಂಪುಟದಲ್ಲಿ ಸಚಿವರಾಗಿದ್ದ ಬ್ರಹ್ಮ ಮೊಹಿಂದ್ರಾ, ಮನ್ ಪ್ರೀತ್ಸಿಂಗ್ ಬಾದಲ್, ತೃಪ್ತ್ ರಾಜಿಂದರ್ ಸಿಂಗ್ ಬಾಜ್ವಾ, ಅರುಣ ಚೌಧರಿ, ಸುಖಬಿಂದರ್ ಸಿಂಗ್ ಸರ್ಕರಿಯಾ, ರಜಿಯಾ ಸುಲ್ತಾನ, ವಿಜಯ್ ಇಂದರ್ ಸಿಂಗ್ಲಾ ಮತ್ತು ಭರತ್ ಭೂಷಣ್ ಅಶು ಅವರನ್ನು ಸಚಿವರಾಗಿ ಉಳಿಸಿಕೊಳ್ಳಲಾಗಿದೆ.

ಅಮರಿಂದರ್ ಸಿಂಗ್ ಅವರ ರಾಜೀನಾಮೆಯ ಬಳಿಕ ಚನ್ನಿ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಲಾಗಿತ್ತು. ಇವರು ರಾಜ್ಯದ ಮೊದಲ ದಲಿತ ಮುಖ್ಯಮಂತ್ರಿ.

ಸಚಿವರಾದ ರಾಣಾ ಗುರ್ಜಿತ್ ಸಿಂಗ್, ಸಿಂಗ್ಲಾ ಮತ್ತು ಮೊಹಿಂದರ್ ಅವರು ಅಮರಿಂದರ್ ಅವರಿಗೆ ಆಪ್ತರು ಎನ್ನಲಾಗಿದೆ. ಅಮರಿಂದರ್ ಸಿಂಗ್ ಸಂಪುಟದಲ್ಲಿ ಸಚಿವರಾಗಿದ್ದ ರಾಣಾ ಗುರ್ಮಿತ್ ಸಿಂಗ್ ಸೋಧಿ, ಸಾಧು ಸಿಂಗ್ ಧರ್ಮಸೋತ್, ಬಲಬೀರ್ ಸಿಂಗ್ ಸಿಧು, ಗುರುಪ್ರೀತ್ ಸಿಂಗ್ ಕಾಂಗಾರ್ ಮತ್ತು ಸುಂದರ್ ಶಾಮ್ ಅರೋರಾ ಅವರಿಗೆ ಹೊಸ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ.

ಸುಖ್‌ಜಿಂದರ್ ಸಿಂಗ್ ರಂಧಾವ ಮತ್ತು ಒ.ಪಿ. ಸೋನಿ ಅವರು ಉಪಮುಖ್ಯಮಂತ್ರಿಗಳಾಗಿ ಸೋಮವಾರ ಅಧಿಕಾರ ವಹಿಸಿಕೊಂಡಿದ್ದರು. ಈ ವಿಸ್ತರಣೆ ಬಳಿಕ ಸಂಪುಟವು ಗರಿಷ್ಠ 18 ಸಚಿವರನ್ನು ಹೊಂದಿದಂತಾಗಿದೆ.

ಅಸಮಾಧಾನ ಸ್ಫೋಟ

ಸಂಪುಟ ವಿಸ್ತರಣೆ ಬೆನ್ನಲ್ಲೇ ಭಿನ್ನಮತ ಕಂಡುಬಂದಿದೆ. ತಮ್ಮನ್ನು ಕಾರಣವಿಲ್ಲದೇ ಸಂಪುಟದಿಂದ ಕೈಬಿಡಲಾಗಿದೆ ಎಂಬ ಕೂಗು ಎದ್ದಿದೆ. ಪ್ರಮಾಣವಚನ ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿದ ಬಲ್ಬೀರ್ ಸಿಂಗ್ ಸಿಧು ಹಾಗೂ ಗುರುಪ್ರೀತ್ ಸಿಂಗ್ ಕಾಂಗಾರ್ ಅವರು ತಮ್ಮನ್ನು ಸಂಪುಟದಿಂದ ಕೈಬಿಟ್ಟಿರುವುದನ್ನು ಪ್ರಶ್ನಿಸಿದರು. ಬಲ್ಬೀರ್ ಸಿಧು ಅವರು ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟರು.

ಆರು ಬಾರಿ ಶಾಸಕ ರಾಕೇಶ್ ಪಾಂಡೆ ಅವರು ಅಸಮಾಧಾನ ಹೊರಹಾಕಿದ್ದಾರೆ. ಸಂಪುಟಕ್ಕೆ ರಾಣಾ ಗುರ್ಜಿತ್ ಸಿಂಗ್ ಅವರ ಸೇರ್ಪಡೆಗೆ ಪಕ್ಷದಲ್ಲೇ ವಿರೋಧ ವ್ಯಕ್ತವಾಗಿದೆ. ಭ್ರಷ್ಟಾಚಾರ ಆರೋಪ ಇರುವ ಅವರ ಬದಲಾಗಿ ದಲಿತ ನಾಯಕನ ಆಯ್ಕೆ
ಯಾಗಬೇಕು ಎಂದು ಮುಖಂಡರು ಹೇಳಿದ್ದಾರೆ.

***

ಸಂಪುಟದಲ್ಲಿ ಜಾಗ ಸಿಗದವರಿಗೆ ಸೂಕ್ತ ಸ್ಥಾನಮಾನ ನೀಡಲಾಗುವುದು.ಯುವಮುಖಗಳು, ಸಾಮಾಜಿಕ ಮತ್ತು ಪ್ರಾದೇಶಿಕ ಸಮತೋಲನ ಸಾಧಿಸಲಾಗಿದೆ
ಹರೀಶ್ ರಾವತ್‌, ಪಂಜಾಬ್ ಕಾಂಗ್ರೆಸ್ ಉಸ್ತುವಾರಿ

***

ತಾವು ನಿರ್ವಹಿಸಿದ ಕೋವಿಡ್ ನಿಯಂತ್ರಣ ಕೆಲಸವನ್ನು ಕೆನಡಾ ಸಂಸತ್ ಸೇರಿದಂತೆ ಎಲ್ಲಡೆಯೂ ಶ್ಲಾಘಿಸಲಾಗಿತ್ತು. ಆದರೆ ನಾನು ಮಾಡಿದ ತಪ್ಪೇನು
ಬಲ್ಬೀರ್ ಸಿಧು, ಸಚಿವಸ್ಥಾನ ವಂಚಿತ

***

ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎಂಬುದು ಮುಖ್ಯಮಂತ್ರಿ ಪರಮಾಧಿಕಾರ. ಕೋವಿಡ್ ಅವಧಿಯಲ್ಲಿ ಬಲ್ಬೀರ್ ಅವರ ಕೆಲಸ ಅವಿಸ್ಮರಣೀಯ
ಮನೀಶ್ ತಿವಾರಿ, ಸಂಸದ, ಅಮರಿಂದರ್ ಆಪ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.