ADVERTISEMENT

ಪ್ರಧಾನಿ ಮೋದಿ ಭೇಟಿಯಾದ ಪಂಜಾಬ್‌ ಸಿಎಂ ಚರಣ್‌ಜಿತ್ ಚನ್ನಿ: ರೈತರ ವಿಚಾರ ಪ್ರಸ್ತಾಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಅಕ್ಟೋಬರ್ 2021, 12:25 IST
Last Updated 1 ಅಕ್ಟೋಬರ್ 2021, 12:25 IST
 ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಮತ್ತು ಪ್ರಧಾನಿ ನರೇಂದ್ರ ಮೋದಿ – ಚಿತ್ರಕೃಪೆ: ಪಿಎಂಒ ಟ್ವಿಟರ್‌ ಖಾತೆ
ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಮತ್ತು ಪ್ರಧಾನಿ ನರೇಂದ್ರ ಮೋದಿ – ಚಿತ್ರಕೃಪೆ: ಪಿಎಂಒ ಟ್ವಿಟರ್‌ ಖಾತೆ   

ನವದೆಹಲಿ: ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.

ಮುಖ್ಯಮಂತ್ರಿಯಾದ ನಂತರ ಇದೇ ಮೊದಲ ಬಾರಿಗೆ ಚನ್ನಿ ಪ್ರಧಾನಿ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ರೈತರ ಪ್ರತಿಭಟನೆ ವಿಚಾರವಾಗಿ ಚರ್ಚೆ ನಡೆಸಿರುವುದಾಗಿ ಚನ್ನಿ ತಿಳಿಸಿದರು.

ಪ್ರಧಾನಿ ಭೇಟಿಯ ಬಳಿಕ ಮಾತನಾಡಿದ ಚನ್ನಿ, ಪ್ರತಿಭಟನಾ ನಿರತ ರೈತರೊಂದಿಗೆ ಮತ್ತೆ ಮಾತುಕತೆ ನಡೆಸುವಂತೆ ಕೋರಿದ್ದೇನೆ, ಹಾಗೇ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿರುವೆ ಎಂದರು.

ADVERTISEMENT

ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ ವರ್ಷ ನವೆಂಬರ್‌ನಿಂದ ದೆಹಲಿಯ ಗಡಿ ಭಾಗಗಳಲ್ಲಿ ಪಂಜಾಬ್‌, ಹರಿಯಾಣ ಮತ್ತು ಉತ್ತರ ಪ್ರದೇಶದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೃಷಿ ಕಾಯ್ದೆಗಳನ್ನು ರದ್ದು ಪಡಿಸುವಂತೆ ಒತ್ತಾಯಿಸಿದ್ದಾರೆ.

ಇದು ಸೌಜನ್ಯದ ಭೇಟಿಯಾದರೂ ಪ್ರಧಾನಿ ಅವರಲ್ಲಿ ಮೂರು ವಿಚಾರಗಳನ್ನು ಹಂಚಿಕೊಂಡಿರುವೆ. ಮೊದಲಿಗೆ- ಸಾಮಾನ್ಯವಾಗಿ ಪಂಜಾಬ್‌ನಲ್ಲಿ ಭತ್ತ ಖರೀದಿ ಪ್ರಕ್ರಿಯೆಯು ಅಕ್ಟೋಬರ್‌ 1ರಂದು ಆರಂಭವಾಗುತ್ತದೆ. ಆದರೆ, ಈ ವರ್ಷ ಕೇಂದ್ರ ಸರ್ಕಾರವು ಅಕ್ಟೋಬರ್‌ 10ರಿಂದ ಆರಂಭಿಸಲು ನಿರ್ಧರಿಸಿದೆ. ಕೂಡಲೇ ಖರೀದಿ ಪ್ರಕ್ರಿಯೆ ಶುರು ಮಾಡುವಂತೆ ಮನವಿ ಮಾಡಿರುವೆ ಎಂದು ಚನ್ನಿ ಹೇಳಿದರು.

ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ಮುಚ್ಚಲಾಗಿರುವ ಕರ್ತಾರ್‌ಪುರ್‌ ಕಾರಿಡಾರ್‌ ತೆರೆಯುವಂತೆ ಕೋರಿದ್ದೇನೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.