ADVERTISEMENT

ಶಿರವಸ್ತ್ರ ಧರಿಸಲೂ ಬಿಡದೆ ಎಳೆದೊಯ್ದ ಪೊಲೀಸರು: ಬಿಜೆಪಿ ನಾಯಕ ಬಗ್ಗಾ ತಂದೆ ಆರೋಪ

ಪಿಟಿಐ
Published 6 ಮೇ 2022, 11:21 IST
Last Updated 6 ಮೇ 2022, 11:21 IST
ದೆಹಲಿ ಬಿಜೆಪಿ ನಾಯಕ ತೇಜಿಂದರ್ ಪಾಲ್ ಸಿಂಗ್ ಬಗ್ಗಾ
ದೆಹಲಿ ಬಿಜೆಪಿ ನಾಯಕ ತೇಜಿಂದರ್ ಪಾಲ್ ಸಿಂಗ್ ಬಗ್ಗಾ    

ನವದೆಹಲಿ: ಪಂಜಾಬ್‌ ಪೊಲೀಸರು ತಮ್ಮ ಮಗನನ್ನು ಬಂಧಿಸುವ ಸಂದರ್ಭ, 'ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಶಿರವಸ್ತ್ರ ಧರಿಸುವುದಕ್ಕೂ ಮಗನಿಗೆ ಅವಕಾಶ ನೀಡಲಿಲ್ಲ' ಎಂದುದೆಹಲಿ ಬಿಜೆಪಿ ನಾಯಕ ತೇಜಿಂದರ್ ಪಾಲ್ ಸಿಂಗ್ ಬಗ್ಗಾ ಅವರ ತಂದೆ ಪ್ರೀತ್‌ಪಾಲ್‌ ಸಿಂಗ್‌ ಶುಕ್ರವಾರ ಆರೋಪಿಸಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಬೆದರಿಕೆ ಒಡ್ಡಿದ ಆರೋಪದ ಮೇಲೆ ಬಗ್ಗಾ ಅವರನ್ನು ಪಂಜಾಬ್ ಪೊಲೀಸರು ಶುಕ್ರವಾರ ಬೆಳಿಗ್ಗೆ ಬಂಧಿಸಿದ್ದಾರೆ.

ಜನಕಪುರಿಯಲ್ಲಿರುವ ತಮ್ಮ ಮನೆಗೆ 10–15 ಮಂದಿ ಪಂಜಾಬ್‌ ಪೊಲೀಸರು ನುಗ್ಗಿ, ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಪ್ರೀತ್‌ಪಾಲ್‌ ಸಿಂಗ್‌ ಅವರು ಜನಕಪುರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೆಹಲಿ ಬಿಜೆಪಿ ಘಟಕದ ಮುಖ್ಯಸ್ಥ ಆದೇಶ್‌ ಗುಪ್ತಾ ಅವರೂ, ಪ್ರೀತ್‌ಪಾಲ್‌ ಅವರೊಂದಿಗೆ ಇದ್ದರು. ಈ ವೇಳೆ ಠಾಣೆ ಎದುರು ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು, ಪ್ರತಿಭಟನೆ ನಡೆಸಿ, ಪಂಜಾಬ್ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.

ADVERTISEMENT

ಮಗನ ಬಂಧನ ಕುರಿತು ಮಾಧ್ಯಮದವರಿಗೆ ಮಾತನಾಡಿರುವ ಸಿಂಗ್‌, 'ಅದೇತಾನೆ ಬೆಳಗ್ಗಿನ ಉಪಹಾರ ಮುಗಿಸಿದ್ದೆವು. ಆಗ ಪಂಜಾಬ್‌ ಪೊಲೀಸರಿಬ್ಬರು ಮನೆಯೊಳಗೆ ಬಂದರು.ಚಹಾ ಸೇವಿಸುವಂತೆ ಹೇಳಿದೆವು. ಅವರು ಸಮಾಧಾನದಿಂದಲೇ ಮಾತನಾಡಿದರು. ತೇಜಿಂದರ್‌ ಕೂಡ ಅಲ್ಲೇ ಕುಳಿತಿದ್ದ. ಕೆಲ ನಿಮಿಷಗಳ ನಂತರ 10–15 ಪೊಲೀಸರು ಒಳಗೆ ನುಗ್ಗಿದರು. ಅವರು ತೇಜಿಂದರ್‌ನನ್ನುಎಳೆದೊಯ್ದರು. ಶಿರವಸ್ತ್ರ ಧರಿಸುವುದಕ್ಕೂ ಅವನಿಗೆ ಅವಕಾಶ ನೀಡಲಿಲ್ಲ' ಎಂದಿದ್ದಾರೆ.

ಮುಂದುವರಿದು,'ಈ ಘಟನೆಯನ್ನು ವಿಡಿಯೊ ಮಾಡಲು ಪ್ರಯತ್ನಿಸಿದಾಗ, ನನ್ನ ಮೊಬೈಲ್‌ ಕಸಿದುಕೊಂಡರು. ನನ್ನ ಮುಖಕ್ಕೆ ಗುದ್ದಿದರು. ಸುಮ್ಮನೆ ಕುಳಿತುಕೊಳ್ಳುವಂತೆ ಮಾಡಿದರು' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬಗ್ಗಾ ಅವರ ತಂದೆ ಮೇಲೆ ಹಲ್ಲೆ ನಡೆಸಿದ್ದಕ್ಕೆ ಸಂಬಂಧಿಸಿದಂತೆ ಪಂಜಾಬ್‌ ಪೊಲೀಸರ ವಿರುದ್ಧ ಜನಕಪುರಿ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ ಎಂದುಆದೇಶ್‌ ಗುಪ್ತಾ ಹೇಳಿದ್ದಾರೆ.

ಈ ಕುರಿತು ಹಿಂದಿಯಲ್ಲಿ ಟ್ವೀಟ್‌ ಮಾಡಿರುವ ಗುಪ್ತಾ, ಪಂಜಾಬ್‌ ಪೊಲೀಸರು ಗೂಂಡಾಗಿರಿ ನಡೆಸಿದ್ದಾರೆ. ಒಬ್ಬ ಸಿಖ್‌ ವ್ಯಕ್ತಿ ಶಿರವಸ್ತ್ರ ಧರಿಸುವುದಕ್ಕೂ ಅವರು ಬಿಡಲಿಲ್ಲ. ಇದನ್ನು ವಿರೋಧಿಸಿದ ತಂದೆಯ ಮೇಲೂ ಹಲ್ಲೆ ನಡೆಸಲಾಗಿದೆ. ಅವರು ಮಾತನಾಡದಂತೆ ಬಾಯಿಗೆ ಬಟ್ಟೆ ತುರುಕಲಾಗಿದೆ. ಕೇಜ್ರಿವಾಲ್‌ ಅವರೇ, ಇಂತಹ ಅಸಭ್ಯ ವರ್ತನೆಯ ಮೂಲಕ ಏನನ್ನು ಹೇಳಲು ಹೊರಟಿದ್ದೀರಿ? ನೀವೇನು ಬ್ರಿಟೀಷರು ಅಥವಾ ಮೊಘಲರ ಆಳ್ವಿಕೆಯಿಂದ ಉತ್ತೇಜನ ಪಡೆದಿದ್ದೀರಾ? ಎಂದು ಕಿಡಿಕಾರಿದ್ದಾರೆ.

ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿಯೂ ಆಗಿರುವಬಗ್ಗಾ ಅವರನ್ನು,ಕಳೆದ ತಿಂಗಳು ಮೊಹಾಲಿಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ ಎಂದು ಪಂಜಾಬ್‌ ಪೊಲೀಸರು ತಿಳಿಸಿದ್ದಾರೆ.

ಬಗ್ಗಾ ಅವರುಧಾರ್ಮಿಕ ಭಾವನೆಗಳಿಗೆ ದಕ್ಕೆ ಉಂಟುಮಾಡುವ, ದ್ವೇಷ ಹರಡುವ ಮತ್ತು ಅಪರಾಧಕ್ಕೆ ಕುಮ್ಮಕ್ಕು ನೀಡುವಂತೆ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಮೊಹಾಲಿಯ ಎಎಪಿ ನಾಯಕ ಸನ್ನಿ ಅಹ್ಲುವಾಲಿಯ ದೂರು ನೀಡಿದ್ದರು.

ದೆಹಲಿ ಮುಖ್ಯಮಂತ್ರಿ ನಿವಾಸದ ಎದುರು ಬಿಜೆಪಿ ಯುವ ಘಟಕ ಕಳೆದ ತಿಂಗಳು (ಮಾರ್ಚ್ 3ರಂದು) ನಡೆಸಿದ ಪ್ರತಿಭಟನೆಯಲ್ಲಿ ಬಗ್ಗಾ ಭಾಗವಹಿಸಿದ್ದರು. ಆ ವೇಳೆಕೇಜ್ರಿವಾಲ್ ಅವರಿಗೆ ಬೆದರಿಕೆ ಒಡ್ಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ದೆಹಲಿ ಮತ್ತು ಪಂಜಾಬ್‌ ಎರಡೂ ಕಡೆ ಎಎಪಿ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.