ಜಗಜಿತ್ ಸಿಂಗ್ ಡಲ್ಲೇವಾಲ್
ಚಂಡೀಗಢ: ಪಂಜಾಬ್‌ನ ರೈತ ಮುಖಂಡ ಜಗಜೀತ್ ಸಿಂಗ್ ಡಲ್ಲೇವಾಲ್ ಅವರು 131 ದಿನಗಳಿಂದ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಭಾನುವಾರ ಅಂತ್ಯಗೊಳಿಸಿದರು.
ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯ ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದ ನವೆಂಬರ್ 26ರಿಂದ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು.
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ರವನೀತ್ ಸಿಂಗ್ ಬಿಟ್ಟು ಅವರು ಆಮರಣಾಂತ ಉಪವಾಸ ಅಂತ್ಯಗೊಳಿಸುವಂತೆ ಮನವಿ ಮಾಡಿದ ಒಂದು ದಿನದ ನಂತರ ಈ ಘೋಷಣೆ ಹೊರಬಿದ್ದಿದೆ.
ಪಂಜಾಬ್‌ನ ಫತೇಘರ್ ಸಾಹಿಬ್ ಜಿಲ್ಲೆಯ ಸಿರ್ಹಿಂದ್‌ನಲ್ಲಿ ಆಯೋಜಿಸಲಾದ 'ಕಿಸಾನ್ ಮಹಾಪಂಚಾಯತ್'ನಲ್ಲಿ ತಮ್ಮ ಅನಿರ್ದಿಷ್ಟಾವಧಿ ಉಪವಾಸವನ್ನು ಕೊನೆಗೊಳಿಸುತ್ತಿರುವುದಾಗಿ ಡಲ್ಲೇವಾಲ್ ಘೋಷಿಸಿದ್ದಾರೆ.
‘ನೀವೆಲ್ಲರೂ ಉಪವಾಸ ಸತ್ಯಾಗ್ರಹ ನಿಲ್ಲಿಸುವಂತೆ ಹೇಳಿದ್ದೀರಿ. ನನ್ನ ಹೋರಾಟದ ಬಗ್ಗೆ ಕಾಳಜಿ ವಹಿಸಿದ್ದಕ್ಕೆ ನಿಮಗೆ ಋಣಿಯಾಗಿರುವೆ. ನಿಮ್ಮ ಭಾವನೆಯನ್ನು ಗೌರವಿಸುತ್ತೇನೆ. ನಿಮ್ಮ ಆದೇಶ ಸ್ವೀಕರಿಸುವೆ’ ಎಂದು ನೆರೆದಿದ್ದ ರೈತರನ್ನುದ್ದೇಶಿಸಿ ಡಲ್ಲೇವಾಲ್ ಹೇಳಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ಜಂಟಿ ವೇದಿಕೆಯ ಹಿರಿಯ ನಾಯಕ ಡಲ್ಲೇವಾಲ್, ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು 2024ರ ನವೆಂಬರ್ 26ರಂದು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.
2025ರ ಜನವರಿಯಲ್ಲಿ ಕೇಂದ್ರವು ಮಾತುಕತೆಗೆ ಆಹ್ವಾನಿಸಿದ ನಂತರ, ಡಲ್ಲೇವಾಲ್ ಖಾನೌರಿ ಪ್ರತಿಭಟನಾ ಸ್ಥಳದಲ್ಲಿ ವೈದ್ಯಕೀಯ ಚಿಕಿತ್ಸೆಗೆ ಪಡೆಯಲು ಪ್ರಾರಂಭಿಸಿದರು. ಆದರೆ ತಮ್ಮ ಉಪವಾಸವನ್ನು ಅಂತ್ಯಗೊಳಿಸಿರಲಿಲ್ಲ.
ಶನಿವಾರ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸುವಂತೆ ಮನವಿ ಮಾಡಿದ್ದರು.
‘ರೈತ ನಾಯಕ ಡಲ್ಲೇವಾಲ್ ಈಗ ಆಸ್ಪತ್ರೆಯಿಂದ ಹಿಂತಿರುಗಿದ್ದಾರೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾವು ಬಯಸುತ್ತೇವೆ. ಅವರು ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸುವಂತೆಯೂ ನಾವು ವಿನಂತಿಸುತ್ತೇವೆ. ಈಗಾಗಲೇ ನಿರ್ಧರಿಸಿದ ದಿನಾಂಕದ ಪ್ರಕಾರ ಮೇ 4 ರಂದು ಬೆಳಿಗ್ಗೆ 11 ಗಂಟೆಗೆ ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸುತ್ತೇವೆ‘ ಎಂದು ಚೌಹಾಣ್ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದರು.
‘ನಿಮ್ಮ ಆರೋಗ್ಯ ಮತ್ತು ನಿಮ್ಮ ಜೀವ ಪಂಜಾಬ್ ಜನರಿಗೆ ಅಮೂಲ್ಯವಾದುದು. ಏಕೆಂದರೆ ರೈತರು ಮತ್ತು ಕೃಷಿ ಕಾರ್ಮಿಕರ ಹೋರಾಟಕ್ಕೆ ನಿಮ್ಮ ನಾಯಕತ್ವ ಯಾವಾಗಲೂ ಅಗತ್ಯವಾಗಿರುತ್ತದೆ. ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿ‘ ಎಂದು ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ಕೂಡ ಮನವಿ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.