ADVERTISEMENT

ಪಂಜಾಬ್ ರೈತರ ‘ದೆಹಲಿ ಚಲೋ’ಗೆ ತಡೆ; ಹರಿಯಾಣದ ಹೆದ್ದಾರಿಗಳು ಬಂದ್

ಕೃಷಿ ಕಾಯ್ದೆಗಳ ರದ್ಧತಿಗೆ ಆಗ್ರಹ l ಪ್ರತಿಭಟನಾ ಮೆರವಣಿಗೆಗೆ ಅಡ್ಡಿ

ಪಿಟಿಐ
Published 25 ನವೆಂಬರ್ 2020, 21:28 IST
Last Updated 25 ನವೆಂಬರ್ 2020, 21:28 IST
ದಲ್‌ ಖಾಲ್ಸಾ ಸದಸ್ಯರು ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಅಮೃತಸರದ ಸ್ವರ್ಣಮಂದಿರದಿಂದ ದೆಹಲಿಗೆ ಬುಧವಾರ ಹೊರಟರು -– ಪಿಟಿಐ ಚಿತ್ರ
ದಲ್‌ ಖಾಲ್ಸಾ ಸದಸ್ಯರು ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಅಮೃತಸರದ ಸ್ವರ್ಣಮಂದಿರದಿಂದ ದೆಹಲಿಗೆ ಬುಧವಾರ ಹೊರಟರು -– ಪಿಟಿಐ ಚಿತ್ರ   

ಚಂಡೀಗಡ/ನವದೆಹಲಿ: ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ತಂದಿರುವ ಹೊಸ ಕಾಯ್ದೆಗಳನ್ನು ರದ್ದು ಮಾಡುವಂತೆ ಆಗ್ರಹಿಸಿ ಪಂಜಾಬ್‌ನ ರೈತರು ನಡೆಸುತ್ತಿರುವ ‘ದೆಹಲಿ ಚಲೊ’ ಪ್ರತಿಭಟನಾ ಮೆರವಣಿಗೆಗಳನ್ನು ಹರಿಯಾಣ ಪ್ರವೇಶಿಸಲು ಬಿಡುವುದಿಲ್ಲ ಎಂದು ಅಲ್ಲಿನ ಸರ್ಕಾರ ಹೇಳಿದೆ. ಪಂಜಾಬ್‌-ಹರಿಯಾಣ ಗಡಿಯಲ್ಲಿನ ಹೆದ್ದಾರಿಗಳನ್ನು ಹರಿಯಾಣ ಸರ್ಕಾರ ಬಂದ್ ಮಾಡಿದೆ.

ಹರಿಯಾಣದ ಹಿಸಾರ್, ಕುರುಕ್ಷೇತ್ರ ಮತ್ತು ಅಂಬಾಲದಲ್ಲಿ ರಾಜ್ಯದ ರೈತರು ಪ್ರತಿಭಟನೆ ನಡೆಸಿದ್ದಾರೆ. ರೈತರ ಮೇಲೆ ಜಲಫಿರಂಗಿ ಪ್ರಯೋಗಿಸಲಾಗಿದೆ. ಹಲವು ರೈತ ಮುಖಂಡರನ್ನು ವಶಕ್ಕೆ ಪಡೆಯಲಾಗಿದೆ.

ಪಂಜಾಬ್‌ನ ವಿವಿಧ ಭಾಗಗಳಿಂದ ಬುಧವಾರ ಹೊರಟು ಗುರುವಾರ ದೆಹಲಿಯನ್ನು ತಲುಪುವುದು ರೈತರ ಪ್ರತಿಭಟನಾ ಮೆರವಣಿಗೆಯ ಯೋಜನೆಯಾಗಿತ್ತು. ಗುರುವಾರ ಮತ್ತು ಶುಕ್ರವಾರ ದೆಹಲಿಯಲ್ಲಿ ಧರಣಿ ನಡೆಸಲು ನಿರ್ಧರಿಸಲಾಗಿತ್ತು. ಅಖಿಲ ಭಾರತ ರೈತ ಸಂಘರ್ಷ ಸಹಕಾರ ಸಮಿತಿ, ರಾಷ್ಟ್ರೀಯ ಕಿಸಾನ್ ಮಹಾಸಂಘ, ಭಾರತೀಯ ಕಿಸಾನ್ ಯೂನಿಯನ್ ಸಂಘಟನೆಗಳು ಈ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಿವೆ. ದೇಶದ 500ಕ್ಕೂ ಹೆಚ್ಚು ರೈತ ಸಂಘಟನೆಗಳು ಈ ಪ್ರತಿಭಟನೆಗೆ ಬೆಂಬಲ ಸೂಚಿಸಿವೆ. ದೆಹಲಿಯಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ 2 ಲಕ್ಷ ರೈತರು ಸೇರಬಹುದು ಎಂದು ಅಂದಾಜಿಸಲಾಗಿದೆ.

ADVERTISEMENT

ಪಂಜಾಬ್‌ನ ಹಲವೆಡೆಯಿಂದ ರೈತರು ಮೆರವಣಿಗೆ ಮೂಲಕ ಬುಧವಾರ ಬೆಳಿಗ್ಗೆ ದೆಹಲಿಯತ್ತ ಹೊರಟಿದ್ದಾರೆ. ಆದರೆ ಹರಿಯಾಣ ಪೊಲೀಸರು ರಾಜ್ಯದ ಗಡಿಗಳಲ್ಲಿ, ಬ್ಯಾರಿಕೇಡ್ ಹಾಕಿ ಹೆದ್ದಾರಿಗಳನ್ನು ಬಂದ್ ಮಾಡಿದ್ದಾರೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

‘ಪಂಜಾಬ್‌ನಿಂದ ರೈತರ ಮೆರವಣಿಗೆ ಹರಿಯಾಣವನ್ನು ಪ್ರವೇಶಿಸಲು ಬಿಡುವುದಿಲ್ಲ’ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಮಂಗಳವಾರವೇ ಹೇಳಿದ್ದರು. ‘ಹರಿಯಾಣದ ಬಿಜೆಪಿ ಸರ್ಕಾರವು ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಯತ್ನಿಸುತ್ತಿದೆ. ಬುಧವಾರ ಪಂಜಾಬ್‌ನ ಗಡಿಯನ್ನು ಮುಚ್ಚಲಾಗಿದೆ. ಕೆಲವು ಕಡೆ ಹೆದ್ದಾರಿಗಳಿಗೆ ಅಡ್ಡವಾಗಿ ಬಂಡೆಗಲ್ಲುಗಳನ್ನು ಇರಿಸಲಾಗಿದೆ’ ಎಂದು ರೈತ ಸಂಘಟನೆಗಳು ಹೇಳಿವೆ.

ಆದರೆ, ಹೆದ್ದಾರಿ ಬಂದ್ ಮಾಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ‘ಹೆದ್ದಾರಿಯಲ್ಲಿ ಮಾರ್ಗ ಬದಲಾವಣೆಗಾಗಿ ಬ್ಯಾರಿಕೇಡ್ ಹಾಕಲಾಗಿದೆ. ನವೆಂಬರ್ 26-27ರಂದು ಮಾತ್ರ ಹೆದ್ದಾರಿ ಬಂದ್ ಮಾಡುವಂತೆ ಆದೇಶ ಬಂದಿದೆ’ ಎಂದು ಹರಿಯಾಣ ಪೊಲೀಸರು ಹೇಳಿದ್ದಾರೆ.

ಹರಿಯಾಣದ ರೈತರ ಬಂಧನ
ಹರಿಯಾಣದ ರೈತರು ಮತ್ತು ರೈತ ಸಂಘಟನೆಗಳು ಈ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗಿಯಾಗಲು ಸಿದ್ಧತೆ ನಡೆಸಿವೆ. ‘ಪೊಲೀಸರು ಪಂಜಾಬ್‌ನ ರೈತರನ್ನು ತಡೆಯಬಹುದು. ಆದರೆ ಹರಿಯಾಣದ ರೈತರನ್ನು ಹೇಗೆ ತಡೆಯುತ್ತಾರೆ. ಅಲ್ಲಿಂದಲೂ ಸಾವಿರಾರು ರೈತರು ಮೆರವಣಿಗೆಯಲ್ಲಿ ಭಾಗಿಯಾಗಲಿದ್ದಾರೆ’ ಎಂದು ಪಂಜಾಬ್‌ನ ರೈತರು ಹೇಳಿದ್ದಾರೆ.

ಬುಧವಾರ ಮಧ್ಯಾಹ್ನದ ನಂತರ ಹರಿಯಾಣದಲ್ಲಿ ಹಲವು ರೈತ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಿದೆ. ಅಲ್ಲದೆ ಕೋವಿಡ್‌ ಇರುವ ಕಾರಣ, ಪ್ರತಿಭಟನಾ ಮೆರವಣಿಗೆ ನಡೆಸಲು ಅವಕಾಶ ನೀಡಲು ಸಾಧ್ಯವಿಲ್ಲ. ರಸ್ತೆಯಲ್ಲಿ ಮೆರವಣಿಗೆ ನಡೆಸಿದರೆ ಜನಜೀವನಕ್ಕೆ ತೊಂದರೆಯಾಗುತ್ತದೆ’ ಎಂದು ಹರಿಯಾಣ ಪೊಲೀಸರು ಹೇಳಿದ್ದಾರೆ.

ಆದರೆ, ‘ನಾವು ಪ್ರತಿಭಟನೆ ನಡೆಸುವುದು ಖಂಡಿತ, ಅದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ’ ಎಂದು ಹರಿಯಾಣದ ರೈತರು ಹೇಳಿದ್ದಾರೆ. ಹರಿಯಾಣದ ರೈತರು ಬುಧವಾರ ಸಂಜೆಯೇ ಪ್ರತಿಭಟನಾ ಮರವಣಿಗೆ ಆರಂಭಿಸಿದ್ದಾರೆ.

‘ಹರಿಯಾಣದಿಂದ ದೆಹಲಿಗೆ ಹೋಗುವ ಹೆದ್ದಾರಿಗಳನ್ನು ಪೊಲೀಸರು ಬಂದ್ ಮಾಡಿದರೆ, ಬೇರೆಡೆಯಿಂದ ದೆಹಲಿಗೆ ಹೋಗುವ ಎಲ್ಲಾ ಹೆದ್ದಾರಿಗಳನ್ನು ನಾವು ಬಂದ್ ಮಾಡುತ್ತೇವೆ. ಬೇರೆ ದಾರಿಗಳಲ್ಲಿ ಹರಿಯಾಣವನ್ನು ಪ್ರವೇಶಿಸುತ್ತೇವೆ. ನಂತರ ದೆಹಲಿಯನ್ನು ಪ್ರವೇಶಿಸುತ್ತೇವೆ’ ಎಂದು ಪಂಜಾಬ್ ರೈತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೆಹಲಿ: ಪ್ರತಿಭಟನೆಗೆ ಅವಕಾಶವಿಲ್ಲ
ದೆಹಲಿಯಲ್ಲಿ ಪ್ರತಿಭಟನೆ ಮತ್ತು ಮೆರವಣಿಗೆ ನಡೆಸಲು ಅನುಮತಿ ಕೋರಿ ರೈತ ಸಂಘಟನೆಗಳು ಸಲ್ಲಿಸಿದ್ದ ಮನವಿಯನ್ನು ದೆಹಲಿ ಪೊಲೀಸರು ತಿರಸ್ಕರಿಸಿದ್ದಾರೆ.

‘ಕೋವಿಡ್‌ ಇರುವ ಕಾರಣ ಪ್ರತಿಭಟನೆ ನಡೆಸಲು ಅನುಮತಿ ನೀಡಲು ಸಾಧ್ಯವಿಲ್ಲ. ಹೀಗಿದ್ದೂ ಯಾರಾದರೂ ಪ್ರತಿಭಟನೆ ನಡೆಸಿದರೆ, ಅಂತಹವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ದೆಹಲಿ ಪೊಲೀಸರು ಟ್ವೀಟ್ ಮಾಡಿದ್ದಾರೆ. ಈ ವಿಚಾರವನ್ನು ರೈತ ಸಂಘಟನೆಗಳಿಗೂ ತಿಳಿಸಲಾಗಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ಯಾವುದೇ ಪ್ರತಿಭಟನಾ ಮೆರವಣಿಗೆ ದೆಹಲಿಯನ್ನು ಪ್ರವೇಶಿಸದಂತೆ ತಡೆಯಲು ಹೆದ್ದಾರಿಗಳನ್ನು ಬಂದ್ ಮಾಡುತ್ತೇವೆ. ಕಾನೂನು ಸುವ್ಯವಸ್ಥೆ ಕಾಪಾಡಲು ರೈತರು ನಮಗೆ ಸಹಕಾರ ನೀಡಬೇಕು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.