ADVERTISEMENT

ಪಂಜಾಬ್ ಪ್ರವಾಹ: ಕೇಂದ್ರ ನೀಡಿರುವ ₹1,600 ಕೋಟಿ ಎಲ್ಲಿ ಸಾಲುತ್ತೆ; ಮಾನ್ ಅಳಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಸೆಪ್ಟೆಂಬರ್ 2025, 13:32 IST
Last Updated 19 ಸೆಪ್ಟೆಂಬರ್ 2025, 13:32 IST
ಭಗವಂತ್ ಮಾನ್
ಭಗವಂತ್ ಮಾನ್   

ಚಂಡೀಗಢ: ಪಂಜಾಬ್ ರಾಜ್ಯದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ₹13,800 ಕೋಟಿ ನಷ್ಟವಾಗಿದೆ ಎಂದು ಆರಂಭಿಕ ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಅಂತಿಮ ವರದಿಯಲ್ಲಿ ಇದು ಹೆಚ್ಚಾಗಬಹುದು. ಆದರೆ, ಕೇಂದ್ರ ಸರ್ಕಾರ ಕೇವಲ ₹1,600 ನೆರವು ಘೋಷಿಸಿದೆ. ಇದರಲ್ಲಿ ಏನು ಮಾಡಲಿ ಎಂದು ಸಿಎಂ ಭಗವಂತ್ ಮಾನ್ ಪ್ರಶ್ನಿಸಿದ್ದಾರೆ.

ಎನ್‌ಡಿಟಿವಿ ಜೊತೆ ಮಾತನಾಡಿರುವ ಅವರು, ‘₹2,600 ಕೋಟಿಯಲ್ಲಿ ಏನಾಗುತ್ತದೆ? ಏನು ತಮಾಷೆ ಮಾಡುತ್ತಿದ್ದಾರಾ? ಆರಂಭಿಕವಾಗಿ ₹13,000 ಕೋಟಿ ನಷ್ಟ ಅಂದಾಜಿಸಲಾಗಿದೆ. ಇಂತಹ ನಷ್ಟದ ಸಾಗರದಲ್ಲಿ ₹1,600 ಕೋಟಿ ಒಂದು ಹನಿ ಇದ್ದಂತೆ. ಅಲ್ಲದೆ, ರಾಜ್ಯದ ₹8,000 ಕೋಟಿ ಗ್ರಾಮೀಣಾಭಿವೃದ್ಧಿ ನಿಧಿಯನ್ನೂ(ಆರ್‌ಡಿಎಫ್) ಕೇಂದ್ರ ತಡೆಹಿಡಿದಿದೆ’ ಎಂದು ದೂರಿದ್ದಾರೆ.

ಕೃಷಿ ಉತ್ಪನ್ನಗಳ ಖರೀದಿ ಮತ್ತು ಮಾರಾಟದ ಮೇಲೆ ಶೇ 3ರಷ್ಟು ಸೆಸ್ ಅನ್ನು ವಿಧಿಸಿ ಆರ್‌ಡಿಎಫ್ ನಿಧಿ ಸಂಗ್ರಹಿಸಲಾಗುತ್ತಿದ್ದು, ಅದನ್ನು ರಸ್ತೆಗಳು, ಮಂಡಿಗಳ ಅಭಿವೃದ್ಧಿಗೆ ಬಳಸಲಾಗುತ್ತದೆ. ಇದೀಗ, ಪಂಜಾಬ್‌ಗೆ ಬರಬೇಕಿದ್ದ ಆರ್‌ಡಿಎಫ್ ಅನ್ನು ವಿನಾಕಾರಣ ಸ್ಥಗಿತಗೊಳಿಸಲಾಗಿದೆ. ಬಿಜೆಪಿಯೇತರ ಸರ್ಕಾರಗಳು ಇರುವೆಡೆ ಇದೇ ಆಗುತ್ತಿದೆ. ವಿಪಕ್ಷಗಳ ಆಡಳಿತವಿರುವ ರಾಜ್ಯಗಳಿಗೆ ಅವರು ಹಣ ನೀಡುವುದಿಲ್ಲ ಎಂದಿದ್ದಾರೆ.

ADVERTISEMENT

ಇದೇವೇಳೆ, ರಾಜ್ಯದ ವಿಪತ್ತು ನಿರ್ವಹಣಾ ನಿಧಿಯ(ಎಸ್‌ಡಿಆರ್‌ಎಫ್) ಖಾತೆಯಲ್ಲಿ ₹12,000 ಕೋಟಿ ಬಳಕೆಯಾಗದ ಹಣ ಇರುವ ಬಗ್ಗೆ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, 2010/11ರಿಂದ ಖಾತೆಗೆ ಜಮೆಯಾಗಿರುವ ಮತ್ತು ಖರ್ಚು ಮಾಡಿರುವ ನಿಧಿಯ ಮಾಹಿತಿ ನನ್ನ ಬಳಿ ಇದೆ. ಅದರಲ್ಲಿ ಈಗ ₹2,000 ಕೋಟಿಗೂ ಕಡಿಮೆ ಹಣವಿದೆ ಎಂದಿದ್ದಾರೆ.

ಎಸ್‌ಡಿಆರ್‌ಎಫ್‌ಗೆ ಈವರೆಗೆ ಬಂದಿರುವ ನಿಧಿ ₹5,012 ಕೋಟಿಯಾಗಿದ್ದು, ಅದರಲ್ಲಿ ₹ 3,820 ಖರ್ಚಾಗಿದೆ. ಅದರಲ್ಲಿ ಈಗ 1,200 ಕೋಟಿ ಮಾತ್ರವಿದೆ ಎಂದಿದ್ದಾರೆ.

ಜಿಎಸ್‌ಟಿಯ ಪಂಜಾಬ್ ಪಾಲಿನ ₹50,000 ಕೋಟಿಯನ್ನು ಕೇಂದ್ರ ಬಿಡುಗಡೆ ಮಾಡಿಲ್ಲ. ಇದನ್ನು ಬಿಡುಗಡೆ ಮಾಡಿದರೆ ಸಾಕು. ನಮಗೆ ಯಾವುದೇ ವಿಶೇಷ ಪ್ಯಾಕೇಜ್ ಬೇಕಿಲ್ಲ. ಅದರಲ್ಲಿ ನೆರೆ ಪರಿಹಾರ ನಿರ್ವಹಣೆ ಮಾಡುತ್ತೇವೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.