ADVERTISEMENT

ಪಂಜಾಬ್‌ನಲ್ಲಿ ಏಪ್ರಿಲ್ 14ರ ವರೆಗೂ ಕರ್ಫ್ಯೂ ವಿಸ್ತರಣೆ: ಹಳ್ಳಿಗಳಲ್ಲಿ ಕಠಿಣ ಕ್ರಮ

ಏಜೆನ್ಸೀಸ್
Published 31 ಮಾರ್ಚ್ 2020, 2:46 IST
Last Updated 31 ಮಾರ್ಚ್ 2020, 2:46 IST
ಅಮೃತಸರದ ಅಂಗಡಿ ಬೀದಿಯೊಂದರ ಚಿತ್ರ– ಸಂಗ್ರಹ ಚಿತ್ರ
ಅಮೃತಸರದ ಅಂಗಡಿ ಬೀದಿಯೊಂದರ ಚಿತ್ರ– ಸಂಗ್ರಹ ಚಿತ್ರ    

ಚಂಡೀಗಢ: ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ರಾಜ್ಯದಾದ್ಯಂತ ಏಪ್ರಿಲ್‌ 14ರ ವರೆಗೂ ಕರ್ಫ್ಯೂ ವಿಸ್ತರಿಸಲು ಆದೇಶಿಸಿದ್ದಾರೆ. ರಾಜ್ಯದ ಗಡಿ ಭಾಗಗಳನ್ನು ಮುಚ್ಚುವಂತೆ ಸೋಮವಾರ ಸೂಚಿಸಿದ್ದಾರೆ.

ಕೋವಿಡ್‌–19 ವಿರುದ್ಧದ ಕಾರ್ಯಾಚರಣೆಗಳಲ್ಲಿ ತೊಡಗಿರುವ ಪಂಜಾಬ್‌ ಪೊಲೀಸ್‌ ಸಿಬ್ಬಂದಿ ಹಾಗೂ ಶುಚಿತ್ವ ಕೆಲಸಗಳಲ್ಲಿರುವ ಸಿಬ್ಬಂದಿಗೆ ವಿಶೇಷ ಇನ್‌ಶ್ಯುರೆನ್ಸ್‌ ನೀಡುವುದಾಗಿ ಭರವಸೆ ನೀಡಿದ್ದಾರೆ.

ಅಗತ್ಯ ವಸ್ತುಗಳು ಹಾಗೂ ಔಷಧಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಗಮನಿಸಬೇಕು. ಕೋವಿಡ್‌–19ನಿಂದಾಗಿ ಸೃಷ್ಟಿಯಾಗಿರುವ ಬಿಕ್ಕಟ್ಟಿನಿಂದ ಹೊರ ಬರಲು ಹಣಕಾಸು ಯೋಜನೆ ಸಿದ್ಧಪಡಿಸುವಂತೆ ಹಣಕಾಸು ಸಚಿವ ಮನ್‌ಪ್ರೀತ್‌ ಬಾದಲ್‌ ಅವರಿಗೆ ಸೂಚಿಸಿದ್ದಾರೆ.

ADVERTISEMENT

ಶುಚಿತ್ವ ಕಾರ್ಯಗಳನ್ನು ನಡೆಸುವ ಸಿಬ್ಬಂದಿಗೆ (ಪೌರ ಕಾರ್ಮಿಕರು) ಮೂರು ತಿಂಗಳ ವಿಸ್ತರಣೆ ನೀಡಲಾಗಿದ್ದು, ಸ್ಥಳೀಯ ಆಡಳಿತ ಇಲಾಖೆಗಳಿಗೆ ಸೇವಾವಧಿ ವಿಸ್ತರಿಸಲು ಅವಕಾಶ ನೀಡಲಾಗಿದೆ. ಮಾರ್ಚ್‌ 31ರಂದು ಸುಮಾರು 2,000 ಸಿಬ್ಬಂದಿ ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.

ಗ್ರಾಮೀಣ ಭಾಗಗಳಲ್ಲಿ ಗುಂಪು ಗೂಡುವುದು ಮುಂದುವರಿದಿರುವುದನ್ನು ಪ್ರಸ್ತಾಪಿಸಿರುವ ಅವರು, ಅಲ್ಲಿ ಕರ್ಫ್ಯೂ ಕಠಿಣವಾಗಿ ಜಾರಿಯಾಗುವಂತೆ ಕ್ರಮವಹಿಸಲು ಸೂಚಿಸಿದ್ದಾರೆ. ಏಪ್ರಿಲ್‌ 14ರ ವರೆಗೂ ಕರ್ಫ್ಯೂ ಮುಂದುವರಿಯಬೇಕು. ಅನಂತರ ಭಾರತ ಸರ್ಕಾರದ ನಿರ್ಧಾರಗಳ ಅನ್ವಯ ಮುಂದಿನ ಕ್ರಮಗಳನ್ನು ಸೂಚಿಸಲಾಗುತ್ತದೆ. ರೋಗ ಹರಡುವುದನ್ನು ತಡೆಯಲು ಪ್ರಸ್ತುತ ಲಾಕ್‌ಡೌನ್‌ ಒಂದೇ ಸೂಕ್ತ ಮಾರ್ಗವಾಗಿದೆ ಎಂದು ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ತಿಳಿಸಿದ್ದಾರೆ.

ಪಂಜಾಬ್‌ನಲ್ಲಿ ಸೋಂಕು ಲಕ್ಷಣ ಕಾಣಿಸಿಕೊಂಡವರ ಪರೀಕ್ಷೆ ನಡೆಸಲು ಸಂಚಾರಿ ಪರೀಕ್ಷಾ ವ್ಯಾನ್‌ ಕಾರ್ಯಾಚರಣೆಗೆ ತರಲಾಗಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸಿಎಸ್‌ ವಿನಿ ಮಹಾಜನ್‌ ತಿಳಿಸಿದ್ದಾರೆ.

1.5 ಲಕ್ಷ ಪಿಪಿಇ ಕಿಟ್‌ಗಳು, 47,000 ಎನ್‌–95 ಮಾಸ್ಕ್‌ಗಳು, 13 ಲಕ್ಷ ಮೂರು ಪದರಗಳ ಮಾಸ್ಕ್‌ಗಳು ಹಾಗೂ ಹೆಚ್ಚುವರಿಯಾಗಿ 65 ವೆಂಟಿಲೇಟರ್‌ಗಳನ್ನು ತರಿಸಿಕೊಳ್ಳಲಾಗುತ್ತಿದೆ. ಚಿಕಿತ್ಸೆಗಾಗಿ 20,000 ಬೆಡ್‌ ವ್ಯವಸ್ಥೆಯನ್ನು ಗುರುತಿಸಲಾಗಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.