ನವದೆಹಲಿ: ಪಂಜಾಬ್ ಕಿಂಗ್ಸ್ ತಂಡದ ಸಹ ಮಾಲೀಕರಾದ ಬಾಲಿವುಡ್ ನಟಿ ಪ್ರೀತಿ ಜಿಂಟಾ ಅವರು 'ಆಪರೇಷನ್ ಸಿಂಧೂರ' ಉಪಕ್ರಮದಡಿಯಲ್ಲಿ ಸೈನಿಕರ ಪತ್ನಿಯರ ಕಲ್ಯಾಣ ಸಂಘಕ್ಕೆ (AWWA) ₹ 1.10 ಕೋಟಿ ದೇಣಿಗೆ ನೀಡಿದ್ದಾರೆ.
ಶನಿವಾರ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ. ಈ ಕೊಡುಗೆ ಪಂಜಾಬ್ ಕಿಂಗ್ಸ್‌ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ(ಸಿಎಸ್‌ಆರ್) ನಿಧಿಯ ಅವರ ಪಾಲಿನ ಭಾಗವಾಗಿದೆ.
ಈ ದೇಣಿಗೆಯು 'Veer Naris' (ಹುತಾತ್ಮರಾದ ಯೋಧರ ಪತ್ನಿ) ಸಬಲೀಕರಣ ಮತ್ತು ಅವರ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಜೈಪುರದಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಪ್ರೀತಿ ಜಿಂಟಾ, 'ಸಶಸ್ತ್ರ ಪಡೆಗಳ ವೀರ ಯೋಧರ ಕುಟುಂಬಗಳಿಗೆ ನೆರವಾಗುವುದು ನನಗೆ ಗೌರವ ಮತ್ತು ಜವಾಬ್ದಾರಿ ಎರಡೂ ಆಗಿದೆ. ನಮ್ಮ ಸೈನಿಕರು ಮಾಡಿದ ತ್ಯಾಗಕ್ಕೆ ಬೆಲೆ ಕಟ್ಟುವುದು ಅಸಾಧ್ಯ. ಆದರೆ ನಾವು ಅವರ ಕುಟುಂಬಗಳೊಂದಿಗೆ ನಿಂತು ಅವರನ್ನು ಬೆಂಬಲಿಸಬಹುದು. ನಾನು ಭಾರತದ ಸಶಸ್ತ್ರ ಪಡೆಗಳ ಬಗ್ಗೆ ಹೆಮ್ಮೆಪಡುತ್ತೇನೆ. ನಮ್ಮ ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸುವ ಅವರ ಪ್ರಯತ್ನಗಳನ್ನು ಬೆಂಬಲಿಸುತ್ತೇನೆ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.