ADVERTISEMENT

ನೌದೀಪ್‌ ಕೌರ್‌ ಬಂಧನ ಪ್ರಕರಣದಲ್ಲಿ ಮಹಿಳಾ ಆಯೋಗ ಮಧ್ಯಪ್ರವೇಶಿಸಲಿ: ಚೌಧರಿ ಆಗ್ರಹ

ಏಜೆನ್ಸೀಸ್
Published 11 ಫೆಬ್ರುವರಿ 2021, 15:33 IST
Last Updated 11 ಫೆಬ್ರುವರಿ 2021, 15:33 IST
ನೌದೀಪ್‌ ಕೌರ್‌ ಬಂಧನದ ಕುರಿತು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸೋದರ ಸೊಸೆ ಮೀನಾ ಹ್ಯಾರಿಸ್ ಮಾಡಿದ್ದ ಟ್ವೀಟ್‌ನ ಚಿತ್ರ
ನೌದೀಪ್‌ ಕೌರ್‌ ಬಂಧನದ ಕುರಿತು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸೋದರ ಸೊಸೆ ಮೀನಾ ಹ್ಯಾರಿಸ್ ಮಾಡಿದ್ದ ಟ್ವೀಟ್‌ನ ಚಿತ್ರ   

ಚಂಡೀಗಢ: ಕಾರ್ಮಿಕ ಹೋರಾಟದಲ್ಲಿ ಭಾಗವಹಿಸಿದ್ದ ನೌದೀಪ್‌ ಕೌರ್‌ (23) ಅವರು ಕಳೆದ ಒಂದು ತಿಂಗಳಿನಿಂದ ಜಾಮೀನು ಸಿಗದೆ ಜೈಲಿನಲ್ಲಿದ್ದಾರೆ. ಈ ವಿಚಾರದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವು (ಎನ್‌ಸಿಡಬ್ಲ್ಯೂ) ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ಪಂಜಾಬ್‌ನ ಸಾಮಾಜಿಕ ಭದ್ರತೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಅರುಣಾ ಚೌಧರಿ ಆಗ್ರಹಿಸಿದ್ದಾರೆ.

ಹರಿಯಾಣದ ಕುಂಡ್ಲಿಯಲ್ಲಿ ನಡೆದ ಕಾರ್ಮಿಕರ ಹೋರಾಟದಲ್ಲಿ ಭಾಗವಹಿಸಿದ್ದಕೌರ್‌ ಅವರನ್ನು ಜನವರಿ 12 ರಂದು ಬಂಧಿಸಲಾಗಿತ್ತು.

ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಚೌಧರಿ, ʼಮೊಹನ್‌ಲಾಲ್‌ ಖಟ್ಟರ್‌ ನೇತೃತ್ವದ ಬಿಜೆಪಿ ಸರ್ಕಾರವು ಹರಿಯಾಣದಲ್ಲಿ ರೈತರ ಹೋರಾಟವನ್ನು ಕೊನೆಗಾಣಿಸಲು ಮೊದಲ ದಿನದಿಂದಲೂ ಪ್ರಯತ್ನಿಸುತ್ತಿದೆ. ಬೆದರಿಸುವ ನಾಟಕ ಮತ್ತು ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಹರಿಯಾಣ ಸರ್ಕಾರವು ನೌದೀಪ್‌ ಕೌರ್‌ ಹಾಗೂ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಇನ್ನೂ ಹಲವು ಕಾರ್ಮಿಕರನ್ನು ಬಂಧಿಸಿದೆʼ ಎಂದು ತಿಳಿಸಿದ್ದಾರೆ.

ADVERTISEMENT

ʼಕೌರ್‌ ವಿರುದ್ಧ ಸೆಕ್ಷನ್‌ 307 (ಕೊಲೆ ಯತ್ನ) ಮತ್ತು ಸುಲಿಗೆ ಆರೋಪಗಳಲ್ಲಿಪ್ರಕರಣ ದಾಖಲಿಸಿರುವುದು ಒಪ್ಪತಕ್ಕದ್ದಲ್ಲʼ ಎಂದೂ ಹೇಳಿದ್ದಾರೆ.

ಪಂಜಾಬ್‌ ರಾಜ್ಯ ಮಹಿಳಾ ಆಯೋಗದ ಮೂಲಕಪಂಜಾಬ್‌ ಸರ್ಕಾರವು ಕೌರ್‌ ಅವರಿಗೆ ಕಾನೂನಿನ ನೆರವು ನೀಡಲಿದೆ ಎಂದುಎನ್‌ಸಿಡಬ್ಲ್ಯೂಗೆ ತಿಳಿಸಿರುವ ಚೌಧರಿ,ಕಾರ್ಮಿಕ ಹಕ್ಕುಗಳ ಹೋರಾಟಗಾರರೊಂದಿಗೆ ಸಭೆ ನಡೆಸುವಂತೆ ಹರಿಯಾಣ ಮಹಿಳಾ ಆಯೋಗಕ್ಕೆ ಸೂಚಿಸಬೇಕೆಂದುಹರಿಯಾಣ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದೂ ಒತ್ತಾಯಿಸಿದ್ದಾರೆ.

ಎರಡು ತಿಂಗಳಿಗೂ ಹೆಚ್ಚು ಸಮಯದಿಂದ ರೈತರು ಪ್ರತಿಭಟನೆ ನಡೆಸುತ್ತಿರುವ ದೆಹಲಿ-ಹರಿಯಾಣ ಗಡಿಯಿಂದ 3 ಕಿ.ಮೀ ದೂರದಲ್ಲಿರುವ ಸೋನಿಪತ್‌ನ ಕುಂಡ್ಲಿ ಕೈಗಾರಿಕಾ ಪ್ರದೇಶದ ಸಂಸ್ಥೆಯೊಂದರಲ್ಲಿ ಕೌರ್ ಕೆಲಸ ಮಾಡುತ್ತಿದ್ದರು.

ನೌದೀಪ್ ಕುಟುಂಬಕ್ಕೂ ಹೋರಾಟದ ಹಿನ್ನೆಲೆ ಇದ್ದು, ಪೋಷಕರು ಪಂಜಾಬ್‌ನ ರೈತ ಸಂಘಗಳ ಸದಸ್ಯರಾಗಿದ್ದಾರೆ. ಸಹೋದರಿ ದೆಹಲಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಕಾರ್ಯಕರ್ತೆಯಾಗಿದ್ದಾರೆ. ನೌದೀಪ್ ಅವರು ಕಾರ್ಮಿಕ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ʼಮಜ್ದೂರ್ ಅಧಿಕಾರಿ ಸಂಘಟನೆʼ ಕಾರ್ಮಿಕ ಸಂಘಕ್ಕೆ ಸೇರಿದ್ದರು.

ಜನವರಿ 12 ರಂದು ಅವರು ಕುಂಡ್ಲಿ ಕೈಗಾರಿಕಾ ಪ್ರದೇಶದಲ್ಲಿ 20 ಜನರೊಂದಿಗೆ ವೇತನ ಕೋರಿ ಪ್ರತಿಭಟನೆ ನಡೆಸಿ ಪೊಲೀಸರೊಂದಿಗೆ ಘರ್ಷಣೆಯಲ್ಲಿ ತೊಡಗಿದ್ದರಿಂದ ಅವರನ್ನು ಸಂಘದಿಂದ ವಜಾ ಮಾಡಲಾಗಿತ್ತು. ನಂತರ, ನೌದೀಪ್ ಕೌರ್‌ನನ್ನು ಬಂಧಿಸಿದ ಪೊಲೀಸರು, ಕೊಲೆ, ಸುಲಿಗೆ, ಕಳ್ಳತನ, ಗಲಭೆ, ಕಾನೂನುಬಾಹಿರ ಸಭೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪಗಳನ್ನು ಹೊರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.