ಕಳ್ಳಸಾಗಣೆ ಮಾಡುತ್ತಿದ್ದ 30 ಕೆ.ಜಿ ಹೆರಾಯಿನ್ ವಶ
(ಚಿತ್ರ ಕೃಪೆ–@DGPPunjabPolice)
ಚಂಡೀಗಢ: ಗಡಿಯಾಚೆಗಿನ ಮಾದಕವಸ್ತು ಕಳ್ಳಸಾಗಣೆ ಜಾಲವನ್ನು ಭೇದಿಸಿರುವ ಪಂಜಾಬ್ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. ಆತನಿಂದ 30 ಕೆ.ಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಗುಪ್ತಚರ ಇಲಾಖೆ ನೇತೃತ್ವದ ಕಾರ್ಯಾಚರಣೆಯಲ್ಲಿ, ಅಮೃತಸರ ಗ್ರಾಮಾಂತರ ಪೊಲೀಸರು ಗಡಿಯಾಚೆಗಿನ ಕಳ್ಳಸಾಗಣೆ ದಂಧೆಯನ್ನು ಭೇದಿಸಿದ್ದಾರೆ. ಕಳ್ಳಸಾಗಣೆದಾರನನ್ನು ಬಂಧಿಸಲಾಗಿದ್ದು, ಆತನಿಂದ 30 ಕೆ.ಜಿ ಹೆರಾಯಿನ್ ಮತ್ತು ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ. ಪಾಕಿಸ್ತಾನದಿಂದ ಮಾದಕವಸ್ತುಗಳನ್ನು ಸಾಗಿಸಲು ಡ್ರೋನ್‌ಗಳನ್ನು ಬಳಸಲಾಗುತ್ತಿತ್ತು’ ಎಂದು ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ವರ್ಷದಲ್ಲಿ ಈವರೆಗೆ ವಶಪಡಿಸಿಕೊಂಡಿರುವ ದೊಡ್ಡ ಪ್ರಮಾಣದ ಹೆರಾಯಿನ್ ಇದಾಗಿದೆ ಎಂದು ಅವರು ಹೇಳಿದ್ದಾರೆ.
ಬಂಧಿತ ಆರೋಪಿಯು ದೊಡ್ಡ ಪ್ರಮಾಣದ ಹೆರಾಯಿನ್ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಾನೆ. ಇತ್ತೀಚೆಗೆ ಡ್ರೋನ್ ಮೂಲಕ ಕಳ್ಳಸಾಗಣೆ ಮಾಡಿದ ಹೆರಾಯಿನ್ ಅನ್ನು ಈತ ಪಡೆದಿದ್ದಾನೆ ಎಂದು ಅವರು ಹೇಳಿದ್ದಾರೆ.
ಪ್ರಕರಣ ಕುರಿತು ಎಫ್‌ಐಆರ್ ದಾಖಲಿಸಲಾಗಿದೆ. ಕಳ್ಳಸಾಗಣೆ ಜಾಲದ ಮೂಲ ಪತ್ತೆ ಹಚ್ಚಲು ಮತ್ತು ಪ್ರಕರಣದಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳನ್ನು ಕಂಡುಹಿಡಿಯಲು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಯಾದವ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.