ADVERTISEMENT

ಪಂಜಾಬ್: ಮಿತ್ರಪಕ್ಷಗಳ ಅಭ್ಯರ್ಥಿ ಗೆಲ್ಲಿಸಬೇಕಾದ ಅನಿವಾರ್ಯತೆಯಲ್ಲಿ ಕ್ಯಾಪ್ಟನ್‌

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2022, 7:38 IST
Last Updated 17 ಫೆಬ್ರುವರಿ 2022, 7:38 IST
New Delhi: Punjab Lok Congress President Captain Amarinder Singh addresses a press conference after a meeting with BJP ahead of the Punjab Assembly elections, in New Delhi, Monday, Jan. 24, 2022. (PTI Photo/Atul Yadav)(PTI01_24_2022_000182B)
New Delhi: Punjab Lok Congress President Captain Amarinder Singh addresses a press conference after a meeting with BJP ahead of the Punjab Assembly elections, in New Delhi, Monday, Jan. 24, 2022. (PTI Photo/Atul Yadav)(PTI01_24_2022_000182B)   

ಪಟಿಯಾಲಾ (ಪಿಟಿಐ): ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಪಟಿಯಾಲಾದ ಮೋತಿ ಬಾಗ್ ಅರಮನೆಯ ಆವರಣದಲ್ಲಿ ದಿನವೂ ಅವರ ಬೆಂಬಲಿಗರು ಭಾರಿ ಸಂಖ್ಯೆಯಲ್ಲಿ ಸೇರುತ್ತಾರೆ. ಅರಮನೆಯ ಒಳಗೆ ಅಮರಿಂದರ್ ಮತ್ತು ಅವರ ಪಂಜಾಬ್ ಲೋಕ ಕಾಂಗ್ರೆಸ್‌ ಪಕ್ಷದ ನಾಯಕರು ಸರಣಿ ಸಭೆಗಳನ್ನು ನಡೆಸಿದ್ದಾರೆ. ಚುನಾವಣೆ ಘೋಷಣೆಯಾದ ನಂತರ ಪ್ರತಿದಿನವೂ ಮೋತಿ ಬಾಗ್ ಇಂತಹ ದೃಶ್ಯಗಳಿಗೆ ಸಾಕ್ಷಿಯಾಗಿದೆ. ಆದರೆ ಅಮರಿಂದರ್ ಅವರ 50 ವರ್ಷಗಳ ರಾಜಕೀಯ ಜೀವನದಲ್ಲಿ ಇದೇ ಮೊದಲ ಬಾರಿ, ದೊಡ್ಡ ಸವಾಲುಗಳು ಎದುರಾಗಿವೆ.

ಕಾಂಗ್ರೆಸ್‌ ಸರ್ಕಾರದ ಮುಖ್ಯಮಂತ್ರಿ ಹುದ್ದೆಯಿಂದ ಇಳಿದ ಮತ್ತು ಪಕ್ಷವನ್ನು ತೊರೆದ ನಂತರ ಅಮರಿಂದರ್ ಅವರು ತಮ್ಮದೇ ಪ್ರತ್ಯೇಕ ಪಕ್ಷ ಸ್ಥಾಪಿಸಿದ್ದಾರೆ. ಈ ಪಕ್ಷವು ಬಿಜೆಪಿ ಮತ್ತು ಶಿರೋಮಣಿ ಅಕಾಲಿ ದಳ (ಸಂಯುಕ್ತ) ಪಕ್ಷಗಳ ಜತೆಗೆ ಮೈತ್ರಿ ಮಾಡಿಕೊಂಡಿದೆ. ಅಮರಿಂದರ್ ಅವರ ಪೂರ್ವಜರು ಸ್ಥಾಪಿಸಿದ ಪಟಿಯಾಲವು ಈಗ ಅಮರಿಂದರ್ ಅವರ ರಾಜಕೀಯ ಭದ್ರಕೋಟೆಯಾಗಿದೆ.2002, 2007, 2012 ಮತ್ತು 2017ರಲ್ಲಿ ಪಟಿಯಾಲ ನಗರ ಕ್ಷೇತ್ರವನ್ನು ಅವರು ಕಾಂಗ್ರೆಸ್‌ ಪಕ್ಷದಿಂದ ಪ್ರತಿನಿಧಿಸಿದ್ದರು. ಈ ಬಾರಿ ತಮ್ಮದೇ ಸ್ವಂತ ಪಕ್ಷದಿಂದ ಇಲ್ಲಿ ಕಣಕ್ಕೆ ಇಳಿದಿದ್ದಾರೆ. ಈ ಕ್ಷೇತ್ರದಲ್ಲಿ, ಅವರಿಗೆ ತೀವ್ರ ಪೈಪೋಟಿ ನೀಡುವ ಅಭ್ಯರ್ಥಿಯೇ ಇಲ್ಲ ಎನ್ನಲಾಗುತ್ತಿದೆ. ಹೀಗಾಗಿ ಅವರು ಈ ಬಗ್ಗೆ ಹೆಚ್ಚು ಗಮನ ನೀಡಿಲ್ಲ.

ಆದರೆ, ಅವರು ಇಡೀ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಪ್ರತಿದಿನವೂ ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ತೆರಳಬೇಕಾಗಿದೆ. ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿಕೊಂಡರೆ ಮಾತ್ರ ಅವರ ರಾಜಕೀಯ ಭವಿಷ್ಯ ಸುಗಮವಾಗಿ ಇರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಅವರು ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಕಾಂಗ್ರೆಸ್‌ನ ರಾಜ್ಯ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ವಿರುದ್ಧ ತಮ್ಮ ಪ್ರತಿಷ್ಠೆಯನ್ನು ಪಣಕ್ಕೆ ಇಟ್ಟಿದ್ದಾರೆ. ಹೀಗಾಗಿ ಇದು ಅವರಿಗೆ ಅತ್ಯಂತ ಸವಾಲಿನ ಚುನಾವಣೆಯಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ADVERTISEMENT

ತಮ್ಮ ಪಕ್ಷದ ಅಭ್ಯರ್ಥಿಗಳು ಮಾತ್ರವಲ್ಲದೆ, ಮಿತ್ರ ಪಕ್ಷಗಳ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯೂ ಕ್ಯಾಪ್ಟನ್ ಮೇಲೆ ಬಿದ್ದಿದೆ. ಹೀಗಾಗಿ ಅವರು ಕೇಂದ್ರದ ಬಿಜೆಪಿಯ ಪರವಾಗಿಯೂ ಮತ ಯಾಚಿಸುತ್ತಿದ್ದಾರೆ. ಶುಕ್ರವಾರ ಅವರು ಸಾನೌಡ್ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿ ಪರವಾಗಿ ಮತ ಯಾಚಿಸಿದ್ದಾರೆ. ಆಗ, ‘ಪಂಜಾಬ್ ಅಭಿವೃದ್ಧಿಯಾಗಬೇಕಿದ್ದರೆ, ಇಲ್ಲಿ ಡಬಲ್ ಎಂಜಿನ್ ಸರ್ಕಾರದ ಅಗತ್ಯವಿದೆ’ ಎಂದು ಹೇಳಿದ್ದಾರೆ.

‘ರಾಜ್ಯದ ಸಾಲ ಯಾವ ಪ್ರಮಾಣದಲ್ಲಿ ಇದೆ ಎಂಬುದನ್ನು ನೋಡಿ. ಕೇಂದ್ರ ಸರ್ಕಾರದ ನೆರವು ಇಲ್ಲದೆ ರಾಜ್ಯವನ್ನು ಅಭಿವೃದ್ಧಿಯತ್ತ ಒಯ್ಯುವುದು ಸಾಧ್ಯವಿಲ್ಲ. ಕೇಂದ್ರದಲ್ಲಿ ಈಗ ಬಿಜೆಪಿ ಸರ್ಕಾರವಿದೆ. 2024ರಲ್ಲೂ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿಯೇ ಕೇಂದ್ರದಲ್ಲಿ ಸರ್ಕಾರ ರಚಿಸಲಿದೆ. ಹೀಗಾಗಿ ಪಂಜಾಬ್‌ ಅಭಿವೃದ್ಧಿಯಾಗಬೇಕು ಎಂದಿದ್ದರೆ, ನಮ್ಮ ಮೈತ್ರಿಕೂಟಕ್ಕೆ ಮತ ನೀಡಿ’ ಎಂದು ಅವರು ಮತದಾರರನ್ನು ಕೋರಿದ್ದಾರೆ.

ಅಮರಿಂದರ್ ಅವರು ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಶಿರೋಮಣಿ ಅಕಾಲಿ ದಳವನ್ನು ಮಾತ್ರ ಎದುರಿಸಬೇಕಿಲ್ಲ. ಜತೆಗೆ ಎಎಪಿಯ ಸ್ಪರ್ಧೆಯನ್ನೂ ಎದುರಿಸಬೇಕಿದೆ. ಈ ಚುನಾವಣೆಯಲ್ಲಿ ಎಎಪಿ ತೀವ್ರ ಪೈಪೋಟಿ ನೀಡಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಈ ಬಗ್ಗೆ ಅಮರಿಂದರ್, ‘ಕಳೆದ ಬಾರಿ ಎಎಪಿಗೆ 100 ಕ್ಷೇತ್ರಗಳು ಬರುತ್ತವೆ ಎಂದು ಹೇಳಲಾಗಿತ್ತು. ಆದರೆ ಅವರು ಗೆದ್ದಿದ್ದು 20ರಲ್ಲಿ ಮಾತ್ರ. ಈ ಬಾರಿಯೂ ಅದೇ ಆಗಲಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.