ಪಟಿಯಾಲ: ಜನರ ತೀರ್ಪಿಗೆ ತಲೆಬಾಗುವೆ ಎಂದು ‘ಪಂಜಾಬ್ ಲೋಕ್ ಕಾಂಗ್ರೆಸ್’ ಅಧ್ಯಕ್ಷ, ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳಿದ್ದಾರೆ.
ಚುನಾವಣೆಯಲ್ಲಿ ಸೋಲು ಖಚಿತವಾಗುತ್ತಿದ್ದಂತೆಯೇ ಟ್ವೀಟ್ ಮಾಡಿರುವ ಅವರು, ‘ಜನರ ತೀರ್ಪನ್ನು ಒಪ್ಪಿಕೊಳ್ಳುತ್ತೇನೆ. ಪ್ರಜಾಪ್ರಭುತ್ವಕ್ಕೆ ಜಯ ಸಿಕ್ಕಿದೆ. ಪಂಜಾಬಿಗಳು ಜಾತಿ, ಪಂಥ ಮೀರಿ ಮತ ಚಲಾಯಿಸುವ ಮೂಲಕ ಪಂಜಾಬಿನ ನಿಜವಾದ ಮನೋಭಾವವನ್ನು ತೋರಿಸಿದ್ದಾರೆ. ಎಎಪಿ ಹಾಗೂ ಭಗವಂತ್ ಮಾನ್ ಅವರಿಗೆ ಅಭಿನಂದನೆಗಳು’ ಎಂದು ಉಲ್ಲೇಖಿಸಿದ್ದಾರೆ.
ಅಮರಿಂದರ್ ಸಿಂಗ್ ಅವರು ಪಟಿಯಾಲ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಅಜಿತ್ ಪಾಲ್ ಸಿಂಗ್ ಕೊಹ್ಲಿ ವಿರುದ್ಧ ಸೋಲುವುದು ಬಹುತೇಕ ಖಚಿತಗೊಂಡಿದೆ.
ಚುನಾವಣಾ ಆಯೋಗದ ವೆಬ್‌ಸೈಟ್ ಅಂಕಿಅಂಶಗಳ ಪ್ರಕಾರ, ಮಧ್ಯಾಹ್ನ 2 ಗಂಟೆ ವೇಳೆಗೆ ಅಜಿತ್ ಪಾಲ್ ಸಿಂಗ್ ಕೊಹ್ಲಿ 48,104 ಮತಗಳನ್ನು ಗಳಿಸಿದ್ದರೆ, ಅಮರಿಂದರ್ ಸಿಂಗ್ ಅವರು 28,231 ಮತಗಳನ್ನು ಗಳಿಸಿದ್ದಾರೆ. ಕೊಹ್ಲಿ ಅವರ ಮತಹಂಚಿಕೆ ಪ್ರಮಾಣ ಶೇ 46.49 ಇದ್ದರೆ, ಅಮರಿಂದರ್ ಸಿಂಗ್ ಮತಹಂಚಿಕೆ ಪ್ರಮಾಣ ಶೇ 27.28ರಷ್ಟಿದೆ.
ಕಾಂಗ್ರೆಸ್‌ನ ಪಂಜಾಬ್ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರ ಜತೆಗಿನ ಭಿನ್ನಾಭಿಪ್ರಾಯ, ಆಂತರಿಕ ಕಲಹದ ಕಾರಣ ಅಮರಿಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನ ತ್ಯಜಿಸಬೇಕಾಗಿ ಬಂದಿತ್ತು. ಬಳಿಕ ಕಾಂಗ್ರೆಸ್ ತ್ಯಜಿಸಿದ್ದ ಅವರು ‘ಪಂಜಾಬ್ ಲೋಕ್ ಕಾಂಗ್ರೆಸ್’ ಪಕ್ಷ ಸ್ಥಾಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.