ADVERTISEMENT

ಪಂಜಾಬ್‌ ಗಡಿಯಲ್ಲಿ ನಾಳೆಯಿಂದ ಬೀಟ್‌ ರಿಟ್ರೀಟಿಂಗ್ ಮರುಆರಂಭ

​ಪ್ರಜಾವಾಣಿ ವಾರ್ತೆ
Published 20 ಮೇ 2025, 14:12 IST
Last Updated 20 ಮೇ 2025, 14:12 IST
   

ಅಮೃತಸರ: ‘ಆಪರೇಷನ್​ ಸಿಂಧೂರ’ ಬಳಿಕ ಪಂಜಾಬ್​ನ ಗಡಿಯ ಮೂರೂ ಚೆಕ್​ಪೋಸ್ಟ್​ಗಳಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ಗಡಿ ಭದ್ರತಾ ಪಡೆಯ ರಿಟ್ರೀಟ್​ (ಕವಾಯತು​​) ಸಮಾರಂಭ ಬುಧವಾರದಿಂದ ಆರಂಭವಾಗಲಿದೆ ಎಂದು ಬಿಎಸ್​ಎಫ್​ ಹೇಳಿದೆ.

ಅಮೃತ​ಸರದ ಅಟ್ಟಾರಿ– ಪಾಕಿಸ್ತಾನದ ವಾಘ ಗಡಿ, ಫಿರೋಜ್​ಪುರದ ಹುಸೇನಿವಾಲಾ ಮತ್ತು ಫಾಜಿಲ್ಕಾ ಜಿಲ್ಲೆಯ ಸಾದ್ಕಿಯಲ್ಲಿನ ಜಂಟಿ ಚೆಕ್ ಪೋಸ್ಟ್‌ಗಳಲ್ಲಿ ಧ್ವಜ ಇಳಿಸುವ ಕಾರ್ಯಕ್ರಮವೇ ರಿಟ್ರೀಟ್​ ಆಗಿದೆ. ಆಪರೇಷನ್​ ಸಿಂಧೂರ ಕಾರ್ಯಾಚರಣೆಯಿಂದಾಗಿ ಮೇ 9 ರಂದು ಸಂಜೆ 6 ರಿಂದ ಇದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಬುಧವಾರ ಸಂಜೆ 6 ಗಂಟೆಗೆ ಇದು ಪುನರಾರಂಭವಾಗಲಿದೆ. ಬುಧವಾರದಿಂದ ಸಾರ್ವಜನಿಕರ ವೀಕ್ಷಣೆಗೂ ಮುಕ್ತವಾಗಲಿದೆ.

ಮಂಗಳವಾರವೇ ಈ ಸಮಾರಂಭವನ್ನು ಪುನರಾರಂಭಿಸಲಾಯಿತು. ಆದರೆ, ಇದನ್ನು ವೀಕ್ಷಿಸಲು ಪತ್ರಕರ್ತರಿಗೆ ಮಾತ್ರ ಅವಕಾಶವಿತ್ತು. ಬುಧವಾರದಿಂದ ಸಾರ್ವಜನಿಕರು ಭಾಗವಹಿಸಬಹುದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.  

ADVERTISEMENT

ಆದಾಗ್ಯೂ, ಬಿಎಸ್ಎಫ್‌ ಪಡೆಗಳು ಪಾಕಿಸ್ತಾನದ ರೇಂಜರ್‌ಗಳೊಂದಿಗೆ ಹಸ್ತಲಾಘವ ನೀಡುವುದಿಲ್ಲ ಮತ್ತು ಈ ಹಿಂದೆ ಘೋಷಿಸಿದಂತೆ ಧ್ವಜವನ್ನು ಕೆಳಕ್ಕೆ ಇಳಿಸುವ ಪ್ರಕ್ರಿಯೆ ವೇಳೆ ಗಡಿಯ ಗೇಟು ತೆರೆಯುವುದಿಲ್ಲ. ಹಾಗಾಗಿ, ಸಮಾರಂಭದ ಅವಧಿ ತಗ್ಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.‌‌

ಪ್ರತಿ ದಿನ ಸಂಜೆ ಈ ಮೂರು ಸ್ಥಳಗಳಲ್ಲಿ ಧ್ವಜವನ್ನು ಇಳಿಸುವ ಪ್ರಕ್ರಿಯೆಯನ್ನು ಬಿಎಸ್‌ಎಫ್‌ ತುಕಡಿಗಳು ನಡೆಸುತ್ತಿದ್ದವು. ಸಾರ್ವಜನಿಕರ ಸುರಕ್ಷೆತೆ ದೃಷ್ಟಿಯಿಂದ ಮೇ 8ರಿಂದ ಇದರ ವೀಕ್ಷಣೆಗೆ ಪ್ರವೇಶ ನಿರ್ಬಂಧಿಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. 

ಈ ರಿಟ್ರೀಟ್​ ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯ ಶಿಸ್ತು ಮತ್ತು ಸಾಂಸ್ಕೃತಿಕ ಹೆಮ್ಮೆಯನ್ನು ಬಿಂಬಿಸಲಾಗುತ್ತದೆ. ಗೊತ್ತುಪಡಿಸಿದ ಗಡಿಯಲ್ಲಿ ಬಿಎಸ್​ಎಫ್​ ಮತ್ತು ಪಾಕಿಸ್ತಾನದ ಸೇನೆ ಮುಖಾಮುಖಿಯಾಗಿ ಈ ಕವಾಯತು ನಡೆಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.