
ಚಂಡೀಗಢ: ಪಂಜಾಬ್ ಶಾಲಾ ಶಿಕ್ಷಣ ಮಂಡಳಿ (ಪಿಎಸ್‌ಇಬಿ) ನಡೆಸುವ ಪಬ್ಲಿಕ್ ಪರೀಕ್ಷೆಗಳಲ್ಲಿನ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಮಹತ್ವದ ಸುಧಾರಣೆ ತರಲು ಮುಂದಾಗಿರುವ ಪಂಜಾಬ್ ರಾಜ್ಯ ಸರ್ಕಾರ, ಪ್ರಸಕ್ತ ವರ್ಷದಿಂದ ‘ಆನ್–ಸ್ಕ್ರೀನ್ ಮಾರ್ಕಿಂಗ್’ (ಒಎಸ್‌ಎಂ) ವ್ಯವಸ್ಥೆ ಜಾರಿಗೊಳಿಸಲು ಸಜ್ಜಾಗಿದೆ.
ಈ ವರ್ಷದ ಮಾರ್ಚ್‌ನಲ್ಲಿ ನಡೆಯುವ ಕೆಲ ಪರೀಕ್ಷೆಗಳಲ್ಲಿನ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ನೂತನ ವಿಧಾನದ ಮೂಲಕ ನಡೆಸಲು ಮಂಡಳಿ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.
ಶಾಲಾ ಹಂತದ ಪಬ್ಲಿಕ್ ಪರೀಕ್ಷೆಗಳಲ್ಲಿ ಡಿಜಿಟಲ್ ಮೌಲ್ಯಮಾಪನ ಅಳವಡಿಸಿಕೊಂಡ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಂಜಾಬ್ ಪಾತ್ರವಾಗಲಿದೆ ಎಂದು ಅಲ್ಲಿನ ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಬೈನ್ಸ್ ಮಾಹಿತಿ ನೀಡಿದ್ದಾರೆ.
‘ಈ ಯೋಜನೆಯ ಭಾಗವಾಗಿ ಮೊದಲಿಗೆ ಉತ್ತರ ಪತ್ರಿಕೆಗಳನ್ನು ಸಂರಕ್ಷಿತ ಪರಿಸರದಲ್ಲಿ ಸ್ಕ್ಯಾನ್ ಮಾಡಿ, ಕೇಂದ್ರೀಕೃತ ಡ್ಯಾಶ್‌ಬೋರ್ಡ್‌ಗೆ ಅಪ್‌ಲೋಡ್ ಮಾಡಲಾಗುತ್ತದೆ. ಹೀಗೆ ಸ್ಕ್ಯಾನ್ ಮಾಡಿದ ಉತ್ತರ ಪತ್ರಿಕೆಗಳನ್ನು ಶಿಕ್ಷಕರು ಕಂಪ್ಯೂಟರ್‌ಗಳ ಮೂಲಕ ಮೌಲ್ಯಮಾಪನ ಮಾಡುತ್ತಾರೆ. ಒಟ್ಟಾರೆ ಅಂಕಗಳನ್ನು ಸಾಫ್ಟ್‌ವೇರ್ ಮೂಲಕ ಲೆಕ್ಕಹಾಕಲಾಗುತ್ತದೆ. ಇದರಿಂದ ವೇಗ ಮತ್ತು ನಿಖರವಾದ ಫಲಿತಾಂಶ ಸಾಧ್ಯವಾಗುತ್ತದೆ’ ಎಂದು ಸಚಿವರು ಡಿಜಿಟಲ್ ಮೌಲ್ಯಮಾಪನದ ಕುರಿತು ವಿವರಿಸಿದ್ದಾರೆ.
‘ಈ ವ್ಯವಸ್ಥೆಯು ಈಗಾಗಲೇ ಯಶಸ್ವಿಯಾಗಿದೆ. 2025ರ ಸೆಪ್ಟೆಂಬರ್‌ನ ಪೂರಕ ಪರೀಕ್ಷೆಗಳಲ್ಲಿನ 23,000 ಉತ್ತರ ಪತ್ರಿಕೆಗಳನ್ನು ಈ ವ್ಯವಸ್ಥೆ ಮೂಲಕವೇ ಮೌಲ್ಯಮಾಪನ ಮಾಡಲಾಗಿದ್ದು, ತ್ವರಿತ ಮತ್ತು ನಿಖರ ಮೌಲ್ಯಮಾಪನವನ್ನು ಸಾಧ್ಯವಾಗಿಸಿದೆ’ ಎಂದು ಅವರು ಹೇಳಿದರು.
ಒಎಸ್‌ಎಂ ವ್ಯವಸ್ಥೆಯಿಂದ ಪ್ರತಿ ವಿದ್ಯಾರ್ಥಿಗೂ ಪರೀಕ್ಷೆಗಳಲ್ಲಿ ನ್ಯಾಯಸಮ್ಮತ, ವೇಗ ಮತ್ತು ನಿಖರ ಫಲಿತಾಂಶ ಲಭ್ಯವಾಗುತ್ತದೆ. ಇದು ಮಕ್ಕಳ ಭವಿಷ್ಯ ರೂಪಿಸುವಲ್ಲೂ ನೆರವಾಗಲಿದೆ ಎಂದು ಸಚಿವರು ಹೇಳಿದರು.
‘ಈ ಯೋಜನೆಯ ಭಾಗವಾಗಿ ಉತ್ತರ ಪತ್ರಿಕೆಗಳನ್ನು ಹೊಸದಾಗಿ ವಿನ್ಯಾಸಗೊಳಿಸಲಾಗುತ್ತದೆ. ಅದರ ಪ್ರತಿ ಪುಟವೂ ವಿಶಿಷ್ಟವಾದ ಕ್ಯೂಆರ್ ಕೋಡ್ ಹೊಂದಿರುತ್ತದೆ. ಇದು ಸುರಕ್ಷಿತ ಸ್ಕ್ಯಾನಿಂಗ್ ಮತ್ತು ತಡೆರಹಿತ ಡಿಜಿಟಲ್ ಮೌಲ್ಯಮಾಪನ ಪ್ರಕ್ರಿಯೆಗೆ ನೆರವಾಗುತ್ತದೆ’ ಎಂದು ಸಚಿವ ಬೈನ್ಸ್ ಮಾಹಿತಿ ನೀಡಿದರು.
ಈ ಕುರಿತು ಪ್ರತಿಕ್ರಿಯಿಸಿದ ಮಂಡಳಿಯ ಅಧ್ಯಕ್ಷ ಅಮರ್‌ಪಾಲ್ ಸಿಂಗ್, ‘ಇದು ವಿದ್ಯಾರ್ಥಿ ಕೇಂದ್ರಿತ ಯೋಜನೆಯಾಗಿದ್ದು, ಪಾರದರ್ಶಕ ಮೌಲ್ಯಮಾಪನದ ಜತೆಗೆ ತ್ವರಿತ ಫಲಿತಾಂಶವನ್ನೂ ನೀಡುತ್ತದೆ’ ಎಂದು ತಿಳಿಸಿದರು.
ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಮಹತ್ವದ ಸುಧಾರಣೆ
ತ್ವರಿತ ಮತ್ತು ನಿಖರ ಫಲಿತಾಂಶಕ್ಕೆ ಪೂರಕ
ಉತ್ತರ ಪತ್ರಿಕೆಗಳಿಗೆ ಕ್ಯೂಆರ್ ಕೋಡ್
2025ರ ಪೂರಕ ಪರೀಕ್ಷೆಗಳ ಫಲಿತಾಂಶ ಪ್ರಕಟಣೆಯಿಂದ ಉತ್ತೇಜಿತವಾಗಿರುವ ಪಂಜಾಬ್ ಶಾಲಾ ಶಿಕ್ಷಣ ಮಂಡಳಿಯು ಈ ವರ್ಷದ 10ನೇ ತರಗತಿ ಪರೀಕ್ಷೆಯ ಒಂದು ವಿಷಯವನ್ನು ‘ಆನ್–ಸ್ಕ್ರೀನ್ ಮಾರ್ಕಿಂಗ್’ ವ್ಯವಸ್ಥೆ ಮೂಲಕ ಮೌಲ್ಯಮಾಪನ ನಡೆಸಲಿದೆ. ಕ್ರಮೇಣ ಹಂತ ಹಂತವಾಗಿ ಈ ಯೋಜನೆಯನ್ನು ವಿಸ್ತರಿಸಲಿದೆ ಎಂದು ಮಂಡಳಿಯ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.