ಪುರಿ ಜಗನ್ನಾಥ ದೇವರ ವಾರ್ಷಿಕ ರಥಯಾತ್ರೆಯಲ್ಲಿ ಲಕ್ಷಾಂತರ ಜನರು ಶನಿವಾರ ಭಾಗಿಯಾಗಿದ್ದರು–
ಪಿಟಿಐ ಚಿತ್ರ
ಪುರಿ: ಐತಿಹಾಸಿಕ ಪುರಿ ಜಗನ್ನಾಥ ದೇವರ ಭವ್ಯ ‘ಬಹುದಾ ಯಾತ್ರೆ’ಯು ವಾದ್ಯಮೇಳಗಳೊಂದಿಗೆ ಶನಿವಾರ ಆರಂಭವಾಯಿತು. ‘ಪಹಾಂಡಿ’ ಆಚರಣೆಯೊಂದಿಗೆ ಶ್ರೀ ಗುಂಡಿಚಾ ದೇವಸ್ಥಾನದಿಂದ ಯಾತ್ರೆಯು ಅದ್ಧೂರಿಯಾಗಿ ಸಾಗಿತು.
‘ಪಹಾಂಡಿ’ ಯಾತ್ರೆಯು ಬೆಳಿಗ್ಗೆ 10.30ಕ್ಕೆ ಆರಂಭವಾಯಿತು. ವಿಶೇಷ ಪೂಜೆ ಹಾಗೂ ಮಂಗಳಾರತಿ ಬಳಿಕ, ತಾಲಧ್ವಜ ರಥದಲ್ಲಿ ಬಲಭದ್ರ, ದರ್ಪದಲನದಲ್ಲಿ ದೇವಿ ಸುಭದ್ರ ಹಾಗೂ ನಂದಿಘೋಷದಲ್ಲಿ ಜಗನ್ನಾಥ ದೇವರ ವಿಗ್ರಹಗಳನ್ನು ಇರಿಸಲಾಯಿತು.
ಇಲ್ಲಿಂದ 2.6 ಕಿ.ಮೀ ದೂರದಲ್ಲಿರುವ ಜಗನ್ನಾಥ ದೇವರ ಮೂಲಸ್ಥಾನ ಎನ್ನಲಾಗುವ ದೇವಸ್ಥಾನಕ್ಕೆ ರಥಗಳನ್ನು ಎಳೆದು, ಅಲ್ಲಿ ದೇವರನ್ನು ಮತ್ತೆ ಪ್ರತಿಷ್ಠಾಪಿಸಲಾಗುತ್ತದೆ. ಬಹುದಾ ಯಾತ್ರೆಗೆ ಲಕ್ಷಾಂತರ ಜನ ಭಕ್ತರು ಬಂದಿದ್ದಾರೆ.
‘ಗುಂಡಿಚಾ ದೇವಸ್ಥಾನದಲ್ಲಿದ್ದ ಚಕ್ರರಾಜ ಸುದರ್ಶನವನ್ನು ದೇವಿ ಸುಭದ್ರೆಯ ‘ದರ್ಪದಲನ’ ರಥದಲ್ಲಿ ಇರಿಸಲಾಯಿತು. ಸುದರ್ಶನವು ಭಗವಾನ್ ವಿಷ್ಣುವಿನ ಚಕ್ರಾಯುಧವಾಗಿದೆ. ವಿಷ್ಣು ದೇವರನ್ನು ಪುರಿಯಲ್ಲಿ ಜಗನ್ನಾಥನನ್ನಾಗಿ ಆರಾಧಿಸಲಾಗುತ್ತದೆ’ ಎಂದು ಪಂಡಿತ್ ಸೂರ್ಯನಾರಾಯಣ ರಥಶರ್ಮಾ ತಿಳಿಸಿದರು.
ಒಡಿಶಾ ಪೊಲೀಸರು ಹಾಗೂ ಸಿಎಪಿಎಫ್ ಸಿಬ್ಬಂದಿ ಸೇರಿದಂತೆ ಒಟ್ಟು 10,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಿಸಿಟಿವಿ ಕ್ಯಾಮೆರಾ ಹಾಗೂ ಡ್ರೋನ್ ಕಣ್ಗಾವಲು ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಜೂನ್ 29ರಂದು ಗುಂಡಿಚಾ ದೇವಾಲಯದ ಬಳಿ ಧಾರ್ಮಿಕ ಆಚರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೂವರು ಮೃತಪಟ್ಟು, 50 ಮಂದಿ ಗಾಯಗೊಂಡಿದ್ದರು. ಬಳಿಕ ಸ್ಥಳದಲ್ಲಿ ಭಾರಿ ಬಿಗಿ ಭದ್ರತೆ ಒದಗಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.