ADVERTISEMENT

ಜಾಗತಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಿರುವ 'ಕ್ವಾಡ್‌': ಆಸ್ಟ್ರೇಲಿಯಾ ಪ್ರಧಾನಿ

ಏಜೆನ್ಸೀಸ್
Published 12 ಮಾರ್ಚ್ 2021, 3:47 IST
Last Updated 12 ಮಾರ್ಚ್ 2021, 3:47 IST
ಜೋ ಬೈಡನ್, ನರೇಂದ್ರ ಮೋದಿ, ಸ್ಕಾಟ್ ಮಾರಿಸನ್‌ ಹಾಗೂ ಯೊಶೀಹಿಡೆ ಸೂಗಾ
ಜೋ ಬೈಡನ್, ನರೇಂದ್ರ ಮೋದಿ, ಸ್ಕಾಟ್ ಮಾರಿಸನ್‌ ಹಾಗೂ ಯೊಶೀಹಿಡೆ ಸೂಗಾ   

ವಾಷಿಂಗ್ಟನ್‌: ಇಂದು(ಶುಕ್ರವಾರ) ನಡೆಯಲಿರುವ 'ಕ್ವಾಡ್‌' ಶೃಂಗಸಭೆಯಲ್ಲಿ ಇಂಡೊ–ಪೆಸಿಫಿಕ್‌ ವಲಯದಲ್ಲಿನ ಭದ್ರತಾ ಸವಾಲುಗಳು, ಹವಾಮಾನ ಬದಲಾವಣೆ ಮತ್ತು ಕೋವಿಡ್‌ ನಿಯಂತ್ರಣ ಕುರಿತು ಚರ್ಚಿಸಲಾಗುವುದು ಎಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್‌ ತಿಳಿಸಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್, ಜಪಾನ್ ಪ್ರಧಾನಿ ಯೊಶೀಹಿಡೆ ಸೂಗಾ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್‌ ಅವರು ಕ್ವಾಡ್‌ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

'ಹಿಂದೂ ಮಹಾಸಾಗರ–ಪೆಸಿಫಿಕ್‌ ಸಾಗರ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ನಾಲ್ಕು ರಾಷ್ಟ್ರಗಳ ಮುಖ್ಯಸ್ಥರು ಚರ್ಚೆ ನಡೆಸಲಿದ್ದೇವೆ. ಇದೊಂದು ಐತಿಹಾಸಿಕ ಸಭೆ' ಎಂದು ಮಾರಿಸನ್‌ ಬಣ್ಣಿಸಿದ್ದಾರೆ.

ADVERTISEMENT

ಕೋವಿಡ್‌ ಸಾಂಕ್ರಾಮಿಕ ಮತ್ತು ಹವಾಮಾನ ಬದಲಾವಣೆ ವಿಚಾರವಾಗಿ ಸಭೆಯಲ್ಲಿ ಗಂಭೀರ ಚರ್ಚೆಗಳು ನಡೆಯಲಿವೆ ಎಂದೂ ಮಾರಿಸನ್‌ ಹೇಳಿದ್ದಾರೆ.

2004ರ ಸುನಾಮಿ ನಂತರ ‘ಕ್ವಾಡ್‌’ (ಕ್ವಾಡ್ರಿಲ್ಯಾಟರಲ್‌ ಏಷ್ಯನ್ ಆರ್ಚ್ ಆಫ್‌ ಡೆಮಾಕ್ರಸಿ) ರೂಪುಗೊಂಡಿತು. 2007ರಿಂದ ಈ ಸಂಘಟನೆಗೆ ಸ್ಪಷ್ಟ ರೂಪ ನೀಡಲಾಯಿತು. ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಮಟ್ಟದಲ್ಲಿ ನಿಯಮಿತವಾಗಿ ಕ್ವಾಡ್‌ ಸಭೆಗಳು ನಡೆಯುತ್ತಿದ್ದವು.

ಇದೇ ಮೊದಲ ಬಾರಿಗೆ ಶುಕ್ರವಾರ ಈ ದೇಶಗಳ ನಾಯಕರ ಹಂತದ ಸಭೆ ನಡೆಯಲಿದೆ. ನಾಲ್ಕು ರಾಷ್ಟ್ರಗಳ ಮುಖಂಡರು ಸೇರಿ ಚರ್ಚಿಸುವ ಅಗತ್ಯವನ್ನು ಬೈಡೆನ್ ಆಡಳಿತವು ಕಳೆದ ತಿಂಗಳು ಪ್ರಸ್ತಾಪ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.