ADVERTISEMENT

ಕೆಂಪುಕೋಟೆ ಹಿಂಸಾಚಾರ: ಬಂಧಿತರಿಗೆ ತಲಾ ₹ 2 ಲಕ್ಷ ನೀಡಲು ಪಂಜಾಬ್ ಸರ್ಕಾರ ನಿರ್ಧಾರ

ಪಿಟಿಐ
Published 14 ನವೆಂಬರ್ 2021, 2:44 IST
Last Updated 14 ನವೆಂಬರ್ 2021, 2:44 IST
ಚರಣ್‌ಜಿತ್‌ ಸಿಂಗ್‌ ಚನ್ನಿ
ಚರಣ್‌ಜಿತ್‌ ಸಿಂಗ್‌ ಚನ್ನಿ   

ಚಂಡೀಗಡ: ಈ ವರ್ಷ ಗಣರಾಜ್ಯೋತ್ಸವದ ದಿನ ರೈತರ ಟ್ರ್ಯಾಕ್ಟರ್ ರ್‍ಯಾಲಿಯ ಸಂದರ್ಭ ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಬಂಧಿಸಿರುವ 83 ಮಂದಿಗೆ ಪರಿಹಾರವಾಗಿ ತಲಾ ₹ 2 ಲಕ್ಷ ರೂಪಾಯಿಗಳನ್ನು ನೀಡಲು ಪಂಜಾಬ್ ಸರ್ಕಾರ ನಿರ್ಧರಿಸಿದೆ.

ಕೇಂದ್ರದ ವಿವಾದಿತ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಜನವರಿ 26ರಂದು ದೆಹಲಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಟ್ರ್ಯಾಕ್ಟರ್ ರ‍್ಯಾಲಿಗೆ ಕರೆ ನೀಡಿತ್ತು. ಬಳಿಕ ಒಂದು ದಿನದ ಮುನ್ನವೇ ರ‍್ಯಾಲಿಗೆ ಮಾರ್ಗ ನಿಗದಿ ಮಾಡಿ ದೆಹಲಿ ಪೊಲೀಸರು ಮತ್ತು ರೈತರು ಒಪ್ಪಂದಕ್ಕೆ ಬಂದಿದ್ದರು. ಆದರೆ, ಒಪ್ಪಂದ ಮೀರಿ ಪ್ರತಿಭಟನಾಕಾರರು ಅನ್ಯ ಮಾರ್ಗದ ಮೂಲಕ ದೆಹಲಿಗೆ ಪ್ರವೇಶಿಸಿದ್ದರು.

10 ಸಾವಿರಕ್ಕೂ ಅಧಿಕ ಪ್ರತಿಭಟನಾಕಾರರು ಬ್ಯಾರಿಕೇಡ್ ಮುರಿದು, ಬಸ್‌ಗಳನ್ನು ಜಖಂಗೊಳಿಸಿ, ಪೊಲೀಸರ ಮೇಲೆ ಹಲ್ಲೆ ಮಾಡಿದ್ದರು. ಕೆಂಪುಕೋಟೆ ಪ್ರದೇಶಕ್ಕೆ ನುಗ್ಗಿ ದಾಂಧಲೆ ಮಾಡಿ ಅನ್ಯ ಧ್ವಜಾರೋಹಣ ಮಾಡಿದ್ದರು.

ADVERTISEMENT

ಕೃಷಿ ಕಾನೂನು ವಿರೋಧಿಸಿ ನಡೆಸುತ್ತಿರುವ ರೈತರ ಪ್ರತಿಭಟನೆಗೆ ಸರ್ಕಾರದ ಬೆಂಬಲವಿದೆ ಎನ್ನುವುದನ್ನು ಪುನರುಚ್ಚರಿಸುತ್ತಾ, 'ಜನವರಿ 26, 2021 ರಂದು ರಾಷ್ಟ್ರ ರಾಜಧಾನಿಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ನಡೆಸಿದ್ದ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಬಂಧಿಸಿದ 83 ಜನರಿಗೆ ₹ 2 ಲಕ್ಷ ರೂಪಾಯಿ ಪರಿಹಾರವನ್ನು ನೀಡಲು ನಾವು ನಿರ್ಧರಿಸಿದ್ದೇವೆ' ಎಂದು ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಟ್ವೀಟ್‌ ಮಾಡಿದ್ದಾರೆ.

ಕಾಂಗ್ರೆಸ್ ನೇತೃತ್ವದ ಪಂಜಾಬ್ ಸರ್ಕಾರದ ಈ ನಡೆಗೆ ಬಿಜೆಪಿ ಕಿಡಿಕಾರಿದ್ದು, 'ತೆರಿಗೆದಾರರ ಹಣವನ್ನು ದುರುಪಯೋಗ ಪಡಿಸಿಕೊಳ್ಳಲು ಮುಖ್ಯಮಂತ್ರಿಗೆ ಯಾವುದೇ ಅಧಿಕಾರವಿಲ್ಲ' ಎಂದಿದೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚೌಗ, 'ದೇಶದಲ್ಲಿ ವಿಧ್ವಂಸಕ ಶಕ್ತಿಗಳನ್ನು ಬೆಂಬಲಿಸುವುದು ಮತ್ತು ಉತ್ತೇಜಿಸುವ ಕೆಲಸದಲ್ಲಿ ಪಂಜಾಬ್ ಮುಖ್ಯಮಂತ್ರಿ ನಿರತರಾಗಿದ್ದಾರೆ. ಹಿಂಸಾಚಾರಕ್ಕೆ ಪ್ರಚೋದನೆ ನೀಡಿರುವ ಆರೋಪದ ಮೇಲೆ ತನಿಖಾ ಸಂಸ್ಥೆಗಳಿಂದ ಅವರನ್ನು ಬಂಧಿಸಲಾಗಿದೆ ಎಂಬುದನ್ನು ಚನ್ನಿ ಅವರು ಅರ್ಥ ಮಾಡಿಕೊಳ್ಳಬೇಕು. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಚನ್ನಿ ಮತ್ತು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸಿಧು ಇದನ್ನೆಲ್ಲ ಮಾಡುತ್ತಿದ್ದಾರೆ. ತೆರಿಗೆ ದಾರರ ಹಣವನ್ನು ವಿಧ್ವಂಸಕ ಶಕ್ತಿಗಳಿಗೆ ನೀಡುವ ಯಾವುದೇ ಅಧಿಕಾರ ಮುಖ್ಯಮಂತ್ರಿಗಿಲ್ಲ' ಎಂದು ಹೇಳಿದರು.

ಪಂಜಾಬ್ ಬಿಜೆಪಿ ಮುಖ್ಯಸ್ಥ ಅಶ್ವಾನಿ ಶರ್ಮಾ, 'ಮುಖ್ಯಮಂತ್ರಿಯವರ ಈ ನಿರ್ಧಾರ ದುರದೃಷ್ಟಕರ ಮತ್ತು ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ' ಎಂದಿದ್ದಾರೆ.

ಕಳೆದ ವರ್ಷದ ನವೆಂಬರ್‌ನಿಂದಲೂ ದೆಹಲಿಯ ವಿವಿಧ ಗಡಿಗಳಲ್ಲಿ ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರದೊಂದಿಗೆ ಈವರೆಗೂ 11 ಸುತ್ತಿನ ಮಾತುಕತೆ ನಡೆದಿದ್ದು, ಕೃಷಿ ಕಾನೂನುಗಳು ರೈತ ಪರ ಎಂದು ಸರ್ಕಾರ ಹೇಳುತ್ತಿದೆ. ಆದರೆ ರೈತರು ಮಾತ್ರ ಇವು ಕಾರ್ಪೊರೇಟ್ ಕಂಪನಿಗಳಿಗೆ ಅಡಿಯಾಳನ್ನಾಗಿಸುತ್ತದೆ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.