ತಿರುವನಂತಪುರ: ನಾಯಿ ಕಚ್ಚಿದ ಬಳಿಕ ಲಸಿಕೆ ತೆಗೆದುಕೊಂಡಿದ್ದರೂ ರೇಬಿಸ್ ಸೋಂಕು ತಗುಲಿದ ಪರಿಣಾಮ ಏಳು ವರ್ಷದ ಬಾಲಕಿ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಕೊಲ್ಲಂ ಜಿಲ್ಲೆಯ ಕುನ್ನಿಕ್ಕೋಡ್ ಮೂಲದ ನಿಯಾ ಫೈಸಲ್ ಮೃತಪಟ್ಟ ಬಾಲಕಿ. ಇಲ್ಲಿನ ಶ್ರೀ ಅವಿಟ್ಟಂ ತಿರುನಾಳ್ (ಎಸ್‌ಎಟಿ) ಆಸ್ಪತ್ರೆಯಲ್ಲಿ ಕೆಲ ದಿನಗಳಿಂದ ಬಾಲಕಿಯನ್ನು ವೆಂಟಿಲೇಟರ್‌ನಲ್ಲಿ ಇಡಲಾಗಿತ್ತು. ರೇಬಿಸ್ ಸೂಂಕು ತಗುಲಿರುವುದು ಇತ್ತೀಚೆಗಷ್ಟೇ ದೃಢಪಟ್ಟಿತ್ತು.
ಬೀದಿ ನಾಯಿಗಳು ದಾಳಿ ನಡೆಸಿದ ಬೆನ್ನಲ್ಲೇ ರೇಬಿಸ್ ಲಸಿಕೆ ಪಡೆದ ಬಳಿಕವೂ ಮಕ್ಕಳು ಮೃತಪಡುತ್ತಿರುವ ಪ್ರಕರಣಗಳು ಕೇರಳದಲ್ಲಿ ನಡೆಯುತ್ತಿದ್ದು, ಕಳೆದ ತಿಂಗಳಿಂದ ಈ ರೀತಿಯ ಮೂರು ಪ್ರಕರಣಗಳು ನಡೆದಿವೆ.
ನಿಯಾ ಮೃತಪಟ್ಟ ಹಿಂದಿನ ದಿನ, ಮಲಪ್ಪುರಂ ಜಿಲ್ಲೆಯಲ್ಲಿ ಜಿಯಾ ಫಾರಿಸ್ ಎಂಬ ಆರು ವರ್ಷದ ಬಾಲಕಿ ಮೃತಪಟ್ಟಿದ್ದಳು. ಇದಕ್ಕೂ ಕೆಲ ದಿನಗಳ ಹಿಂದೆ ಪತ್ತನಂತಿಟ್ಟದಲ್ಲಿ ಬೀದಿ ನಾಯಿಗಳ ದಾಳಿಗೆ 13 ವರ್ಷದ ಬಾಲಕಿ ಕೊನೆಯುಸಿರೆಳೆದಿದ್ದಳು. ಈ ಇಬ್ಬರೂ ಬಾಲಕಿಯರು ನಾಯಿ ದಾಳಿಯ ಬೆನ್ನಲ್ಲೇ ರೇಬಿಸ್ ಲಸಿಕೆ ಪಡೆದಿದ್ದರು. ಆದರೂ ಜೀವ ಉಳಿಯಲಿಲ್ಲ’ ಎಂದು ಮೂಲಗಳು ತಿಳಿಸಿವೆ.
‘ಈ ರೀತಿ ನಾಯಿಗಳ ದಾಳಿಗೆ ಸಿಲುಕಿ ಯಾವುದೇ ಮಕ್ಕಳು ಸಾಯುವಂತಾಗಬಾರದು’ ಎಂದು ಬಾಲಕಿ ನಿಯಾ ಅವರ ತಾಯಿ ಕಣ್ಣೀರು ಹಾಕಿದರು.
‘ನಮ್ಮ ಮನೆ ಸಮೀಪ ರಾಶಿ ರಾಶಿ ಕಸವನ್ನು ತಂದು ಸುರಿಯಲಾಗುತ್ತಿದೆ. ಕಸ ಹಾಕಬೇಡಿ ಎಂದು ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕಸವನ್ನು ಕಂಡು ಅಲ್ಲಿಗೆ ಬಂದಿದ್ದ ಬೀದಿ ನಾಯಿಗಳು, ನನ್ನ ಮುಂದೆಯೇ ಮಗಳನ್ನು ಕಚ್ಚಿದವು’ ಎಂದು ಅವರು ಅಳಲು ತೋಡಿಕೊಂಡರು.
‘ಲಸಿಕೆಯ ಪ್ರತಿಕಾಯ ಪರಿಣಾಮಕಾರಿಯಾಗುವ ಮುನ್ನವೇ ವೈರಸ್ ಮಿದುಳು ಪ್ರವೇಶಿಸಿ ಸೋಂಕು ತಗುಲುವ ಸಾಧ್ಯತೆಗಳಿರುತ್ತವೆ. ನಿಯಾ ಪ್ರಕರಣದಲ್ಲೂ ಹೀಗೆ ಆಗಿರಬಹುದು’ ಎಂದು ಎಸ್‌ಎಟಿ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಎಸ್. ಬಿಂದು ಪ್ರತಿಕ್ರಿಯಿಸಿದರು.
‘ಬಾಲಕಿಯ ದೇಹದ ವಿವಿಧೆಡೆ ನಾಯಿಗಳು ಕಚ್ಚಿದ್ದವು. ಮುಖ, ಕುತ್ತಿಗೆ, ಕೈ ಮೇಲೆ ಆಳವಾದ ಗಾಯಗಳಾಗಿದ್ದವು. ಈ ಭಾಗಗಳಲ್ಲಿ ನರಗಳ ಸಾಂದ್ರತೆ ಹೆಚ್ಚಿರುವ ಕಾರಣ, ಲಸಿಕೆ ಪರಿಣಾಮಕಾರಿ ಆಗುವ ಮುನ್ನವೇ ಸೋಂಕು ವ್ಯಾಪಿಸಿರುವ ಸಾಧ್ಯತೆಗಳಿವೆ’ ಎಂದು ಅವರು ವಿವರಿಸಿದರು.
‘ಲಸಿಕೆಗಳು ಪರಿಣಮಕಾರಿ ಆಗಿಲ್ಲ ಎಂದು ಹೇಳಲಾಗದು’ ಎಂದ ಅವರು, ‘ಲಸಿಕೆಗಳನ್ನು ಪ್ರಮಾಣಿತ ಮಾರ್ಗಸೂಚಿ ಅನ್ವಯವೇ ನೀಡಲಾಗುತ್ತದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.