ADVERTISEMENT

ಜನಾಂಗೀಯ ನಿಂದನೆ ಮಾಡಿ ಹೊಡೆದರು: ಸಿಂಗಪುರ ಕೋರ್ಟಿನಲ್ಲಿ ಭಾರತ ಮೂಲದ ಮಹಿಳೆ ಅಳಲು

​ಪ್ರಜಾವಾಣಿ ವಾರ್ತೆ
Published 19 ಜನವರಿ 2023, 13:20 IST
Last Updated 19 ಜನವರಿ 2023, 13:20 IST
   

ಸಿಂಗಪುರ: ‘ನಾನು ಅಳುತ್ತಿದ್ದೆ ಮತ್ತು ಹೆದರಿದ್ದೆ. ಆ ಘಟನೆಯಿಂದ ಆದ ಆಘಾತವನ್ನು ಇಂದಿಗೂ ಮರೆಯಲು ಸಾಧ್ಯವಾಗಿಲ್ಲ’ ಎಂದು ಸಿಂಗಪುರದಲ್ಲಿ ದಾಳಿ ಮತ್ತು ಜನಾಂಗೀಯ ನಿಂದನೆಗೆ ಗುರಿಯಾದ ಭಾರತ ಮೂಲದ ಮಹಿಳೆಯೊಬ್ಬರು ಅಲ್ಲಿಯ ಜಿಲ್ಲಾ ಕೋರ್ಟ್‌ ಒಂದರಲ್ಲಿ ಹೇಳಿದರು.

ಮಾಸ್ಕ್‌ ಧರಿಸಿಲ್ಲವೆಂದು ವ್ಯಕ್ತಿಯೊಬ್ಬ ಹಿಂದೊಚಾ ನಿತಾ ವಿಷ್ಣುಭಾಯಿ (57) ಎಂಬ ಮಹಿಳೆ ಮೇಲೆ ದಾಳಿ ಮಾಡಿದ್ದನು. ಈ ಘಟನೆಯು 2021ರ ಮೇ 7ರಂದು ಇಲ್ಲಿಯ ಚೌ ಚು ಕಾಂಗ್‌ ಹೌಸಿಂಗ್‌ ಎಸ್ಟೇಟ್‌ನಲ್ಲಿ ನಡೆದಿತ್ತು. ಪ್ರಕರಣದ ಮೊದಲ ದಿನದ ವಿಚಾರಣೆಯು ಬುಧವಾರ ನಡೆಯಿತು.

ಈ ವೇಳೆ ಆರೋಪಿ ವಾಂಗ್‌ ಕ್ಸಿಂಗ್‌ ಫಾಂಗ್‌ ವಿರುದ್ಧ ಆರೋಪ ಮಾಡಿದ ನೀತಾ, ‘ನಾನು ಕಚೇರಿಗೆ ಹೋಗುತ್ತಾ ಬಿರುಸಾಗಿ ನಡೆದುಕೊಂಡು ಹೋಗುತ್ತೇನೆ. ನಾನು ಅದನ್ನು ವ್ಯಾಯಾಮ ಎಂದು ಪರಿಗಣಸುತ್ತೇನೆ. ಅಂದಿನ ಕೋವಿಡ್‌ ನಿಯಮದ ಪ್ರಕಾರ ವ್ಯಾಯಾಮ ಮಾಡುವ ವೇಳೆ ಮಾಸ್ಕ್‌ ಧರಿಸುವ ಅಗತ್ಯವಿರಲಿಲ್ಲ. ಹಾಗಾಗಿ ನಾನು ಮಾಸ್ಕನ್ನು ಬಾಯಿಯಿಂದ ಕೆಳಗೆ ಇಳಿಸಿದ್ದೆ. ಆ ವೇಳೆ ಅಲ್ಲಿಗೆ ಬಂದ ವಾಂಗ್‌ ದಂಪತಿ ನನ್ನ ವಿರುದ್ಧ ಜನಾಂಗೀಯ ನಿಂದನೆ ಮಾಡಿದರು. ಮಾಸ್ಕ್‌ ಧರಿಸದೇ ಇರುವುದರ ಕಾರಣವನ್ನು ಅವರಿಗೆ ವಿವರಿಸಲು ಮುಂದಾದೆ. ಆದರೆ ವಾಂಗ್‌ ನನ್ನ ಎದೆಗೆ ಬಲವಾಗಿ ಗುದ್ದಿದ. ಆಗ ನಾನು ನೆಲದ ಮೇಲೆ ಬಿದ್ದೆ. ನನ್ನ ಮುಂಗೈ ಮತ್ತು ಮೊಣಕೈಗೆ ಗಾಯವಾಗಿ ರಕ್ತ ಸೋರಿತು’ ಎಂದು ವಿವರಿಸಿದರು.

ADVERTISEMENT

ಈ ಆರೋಪಗಳನ್ನು ಅಲ್ಲಗಳೆದ ವಾಂಗ್‌, ‘ನೀತಾ ನನ್ನ ಮೇಲೆ ಉಗಿದರು ಮತ್ತು ಅವರು ಮಾಸ್ಕ್ ಧರಿಸಿಲ್ಲದ್ದಕ್ಕೆ ಕಾರಣ ಕೇಳುವಂತಿಲ್ಲ ಎಂದರು’ ಎಂದು ಹೇಳಿದರು.

ಈ ಮೊಕದ್ದಮೆಯ ವಿಚಾರಣೆಯನ್ನು ಫೆಬ್ರುವರಿ ಮೊದಲ ವಾರಕ್ಕೆ ಮುಂದೂಡಲಾಗಿದೆ.

ಸಿಂಗಪುರ ಜನಾಂಗೀಯ ನಿಂದನೆ ಆರೋಪ ಸಾಬೀತಾದರೆ ವ್ಯಕ್ತಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.