ADVERTISEMENT

ದಲಿ‌ತ ವ್ಯಕ್ತಿಯ ಕ್ರೂರ ಹತ್ಯೆಯು ದೇಶದ ಆತ್ಮಸಾಕ್ಷಿಯನ್ನೇ ಅಲುಗಾಡಿಸಿದೆ: ರಾಹುಲ್

ಪಿಟಿಐ
Published 17 ಅಕ್ಟೋಬರ್ 2025, 11:47 IST
Last Updated 17 ಅಕ್ಟೋಬರ್ 2025, 11:47 IST
<div class="paragraphs"><p>ಮೃತ ಹರಿಓಂ ವಾಲ್ಮೀಕಿ ಅವರ ಕುಟುಂಬದವರೊಂದಿಗೆ ರಾಹುಲ್‌ ಗಾಂಧಿ</p></div>

ಮೃತ ಹರಿಓಂ ವಾಲ್ಮೀಕಿ ಅವರ ಕುಟುಂಬದವರೊಂದಿಗೆ ರಾಹುಲ್‌ ಗಾಂಧಿ

   

ಕೃಪೆ: ಪಿಟಿಐ

ಕಾನ್ಪುರ: ‘ದಲಿ‌ತ ವ್ಯಕ್ತಿ ಹರಿಓಂ ವಾಲ್ಮೀಕಿ ಅವರ ಕ್ರೂರ ಹತ್ಯೆಯು ದೇಶದ ಆತ್ಮಸಾಕ್ಷಿಯನ್ನೇ ಅಲುಗಾಡಿಸಿದೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಶುಕ್ರವಾರ ಹೇಳಿದರು.

ADVERTISEMENT

ಫತೇಪುರ ಜಿಲ್ಲೆಯಲ್ಲಿರುವ ಸಂತ್ರಸ್ತನ ಕುಟುಂಬವನ್ನು ಭೇಟಿಯಾದ ರಾಹುಲ್‌, ‘ವಾಲ್ಮೀಕಿ ಅವರ ಕುಟುಂಬವನ್ನು ಬೆದರಿಸಲು ಬಿಜೆಪಿ ನೇತೃತ್ವದ ಆಡಳಿತವು ಯತ್ನಿಸುತ್ತಿದೆ’ ಎಂದು ಆರೋಪಿಸಿದರು.

‘ಈ ದೇಶದಲ್ಲಿ ದಲಿತನಾಗುವುದು ಮಾರಣಾಂತಿಕ ಅಪರಾಧವೇ? ಎಂಬ ಪ್ರಶ್ನೆಯು ಹರಿಓಂ ಕುಟುಂಬದವರ ಕಣ್ಣುಗಳಲ್ಲಿತ್ತು’ ಎಂದು ರಾಹುಲ್‌ ‘ಎಕ್ಸ್‌’ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

‘ಸಂತ್ರಸ್ತನ ಕುಟುಂಬವನ್ನು ಭೇಟಿಯಾಗದಂತೆ ತಡೆಯಲು ಆಡಳಿತ ಯತ್ನಿಸಿತು. ಇದು ವ್ಯವಸ್ಥೆಯ ವೈಫಲ್ಯ. ಪ್ರತಿ ಬಾರಿಯೂ ಅಪರಾಧಿಗಳನ್ನು ರಕ್ಷಿಸಿ, ಸಂತ್ರಸ್ತನನ್ನೇ ಕಟಕಟೆಯಲ್ಲಿ ನಿಲ್ಲಿಸುತ್ತದೆ’ ಎಂದು ಉಲ್ಲೇಖಿಸಿದ್ದಾರೆ.

‘ನ್ಯಾಯವನ್ನು ಗೃಹ ಬಂಧನಕ್ಕೆ ಒಳಪಡಿಸಲಾಗುವುದಿಲ್ಲ’ ಎಂದಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ, ‘ಬಿಜೆಪಿ ನೇತೃತ್ವದ ಸರ್ಕಾರವು ಸಂತ್ರಸ್ತನ ಕುಟುಂಬದ ಮೇಲಿನ ಒತ್ತಡವನ್ನು ನಿವಾರಿಸಬೇಕು. ಜೊತೆಗೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವುದನ್ನು ಖಚಿತಪಡಿಸಬೇಕು’ ಎಂದಿದ್ದಾರೆ.

‘ನಾನು ಹರಿಓಂ ಕುಟುಂಬವೂ ಸೇರಿದಂತೆ ದೇಶದ ಪ್ರತಿ ಶೋಷಿತ, ವಂಚಿತ ಹಾಗೂ ಅಸಹಾಯಕ ನಾಗರಿಕರೊಂದಿಗೆ ದೃಢವಾಗಿ ನಿಲ್ಲುತ್ತೇನೆ. ನನ್ನ ಹೋರಾಟ ಹರಿಓಂಗಾಗಿ ಮಾತ್ರ‌ವಲ್ಲ. ಅನ್ಯಾಯಕ್ಕೆ ತಲೆಬಾಗಲು ನಿರಾಕರಿಸುವ ಪ್ರತಿ ಧ್ವನಿಗಾಗಿ’ ಎಂದು ರಾಹುಲ್‌ ‘ಎಕ್ಸ್‌’ನಲ್ಲಿ ಉಲ್ಲೇಖಿಸಿದ್ದಾರೆ.

ರಾಹುಲ್‌ ಗಾಂಧಿ ಅವರು ಹರಿಓಂ ಕುಟುಂಬದ ಸದಸ್ಯರೊಂದಿಗೆ 25 ನಿಮಿಷವಿದ್ದರು.

ದೌರ್ಜನ್ಯ ಉತ್ತುಂಗದಲ್ಲಿ

‘ಬಿಜೆಪಿ ನೇತೃತ್ವದ ಸರ್ಕಾರದ ಆಡಳಿತದಲ್ಲಿ ದಲಿತರ ಮೇಲಿನ ದಬ್ಬಾಳಿಕೆ ಉತ್ತುಂಗದಲ್ಲಿದೆ’ ಎಂದು ರಾಹುಲ್‌ ಗಾಂಧಿ ಆರೋಪಿಸಿದರು.

ಹರಿಓಂ ಕುಟುಂಬದವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕುಟುಂಬದ ವಿರುದ್ಧ ಅಪರಾಧ ನಡೆದಿದ್ದರೂ ಅವರನ್ನೇ ಆರೋಪಿಗಳು ಎಂದು ಭಾವಿಸುವಂತೆ ಮಾಡಲಾಗಿದೆ. ನ್ಯಾಯವನ್ನಷ್ಟೇ ಬಯಸುತ್ತಿರುವ ಅವರೆಲ್ಲರನ್ನೂ ಮನೆಯೊಳಗೆ ಇರುವಂತೆ ಮಾಡಿ, ಬೆದರಿಸಲಾಗುತ್ತಿದೆ’ ಎಂದು ದೂರಿದರು.

‘ಕೆಲವು ದಿನಗಳ ಹಿಂದೆ ದಲಿತ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ನಾನು ಅಲ್ಲಿಗೂ ಹೋಗಿದ್ದೆ. ಇಂದು ಇಲ್ಲಿಗೆ ಭೇಟಿ ನೀಡಿದ್ದೇನೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ವೈ. ಪೂರನ್ ಕುಮಾರ್‌ ಆತ್ಮಹತ್ಯೆ ಪ್ರಕರಣ ಪ್ರಸ್ತಾಪಿಸಿದರು.

‘ರಾಹುಲ್ ಗಾಂಧಿ ಅವರು ನಮ್ಮ ಕುಟುಂಬದ ಭೇಟಿಯನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳಬಾರದು. ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ನಮಗೆ ತೃಪ್ತಿಯಿದೆ. ಇಲ್ಲಿ ರಾಜಕೀಯದ ಅಗತ್ಯವಿಲ್ಲ’ ಎಂದು ರಾಹುಲ್‌ ಭೇಟಿಗೂ ಮುನ್ನ ಸಂತ್ರಸ್ತನ ಸಹೋದರ ಶಿವಂ ಅವರು ವಿಡಿಯೊವೊಂದರಲ್ಲಿ ಹೇಳಿದ್ದಾರೆ.

ಬಿಜೆಪಿಯು ಒತ್ತಡ ಹೇರಿ ಈ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿಸಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.