ADVERTISEMENT

ಕಾಸರಗೋಡು: ರ್‍ಯಾಗಿಂಗ್‌ಗೆ ಬಲಿಪಶುವಾಗಿದ್ದ ಸಾವಿತ್ರಿ ಸಾವು

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2025, 19:12 IST
Last Updated 18 ಮಾರ್ಚ್ 2025, 19:12 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಕಾಸರಗೋಡು: ಸುಮಾರು 28 ವರ್ಷಗಳ ಹಿಂದೆ ಕಾಞಂಗಾಡಿನ ನೆಹರೂ ಕಾಲೇಜಿನಲ್ಲಿ ಪ್ರಥಮ ಪಿಯು ಓದುತ್ತಿದ್ದಾಗ, ರ್‍ಯಾಗಿಂಗ್‌ಗೆ ಒಳಗಾಗಿ, ಅದರ ಆಘಾತದಿಂದ ಗಂಭೀರ ಮಾನಸಿಕ ಸಮಸ್ಯೆಗೆ ಸಿಲುಕಿದ್ದ ಚೆರ್ವತ್ತೂರು ವೆಂಗಾಟ್ ನಿವಾಸಿ ಎಂ.ವಿ.ಸಾವಿತ್ರಿ (45) ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ನಿಧನರಾದರು.

ADVERTISEMENT

ಪ್ರತಿಭಾವಂತೆಯಾಗಿದ್ದ ಸಾವಿತ್ರಿ 1995–96ನೇ ಸಾಲಿನಲ್ಲಿ ಪ್ರಥಮ ಶ್ರೇಣಿಯಲ್ಲಿ ಎಸ್‌ಎಸ್‌ಎಲ್‌ಸಿ ಪಾಸಾಗಿದ್ದರು.  ಕಾಞಂಗಾಡಿನ ನೆಹರೂ ಕಾಲೇಜಿನಲ್ಲಿ ಪ್ರಥಮ ಪಿಯುಗೆ ಪ್ರವೇಶ ಪಡೆದಿದ್ದರು. ಆದರೆ, ಕಾಲೇಜಿಗೆ ಸೇರಿದ ಮೂರನೆಯ ದಿನವೇ ರ್‍ಯಾಗಿಂಗ್‌ಗೆ ಒಳಗಾಗಿದ್ದರು. ಈ ಘಟನೆಯಿಂದ ಮಾನಸಿಕವಾಗಿ ಕುಸಿದು ಹೋಗಿದ್ದ ವಿದ್ಯಾರ್ಥಿನಿ, ನಂತರ ಕಾಲೇಜಿಗೆ ಹೋಗುವುದನ್ನೇ ನಿಲ್ಲಿಸಿದ್ದರು. ಭಯದಿಂದ ಮನೆಯಿಂದಲೂ ಹೊರಗೆ ಹೆಜ್ಜೆ ಇರಿಸುತ್ತಿರಲಿಲ್ಲ. ಮಾನಸಿಕ ಒತ್ತಡದಿಂದ, ಜ್ಯಾಮಿಟ್ರಿ ಬಾಕ್ಸ್‌ನಲ್ಲಿದ್ದ ಕಂಪಾಸ್‌ನಿಂದ ತಮ್ಮ ಬಲಗಣ್ಣನ್ನು ಚುಚ್ಚಿಕೊಂಡು, ದೃಷ್ಟಿಯನ್ನೇ ಕಳೆದುಕೊಂಡಿದ್ದರು. ಮೂರು ದಶಕಗಳಿಂದ ಸಾವು–ಬದುಕಿನೊಂದಿಗೆ ಹೋರಾಡುತ್ತಿದ್ದರು.

ಸಾವಿತ್ರಿ ಅವರನ್ನು ಆರಂಭದಲ್ಲಿ ಕೊಯಿಕ್ಕೋಡ್‌ ಮತ್ತು ತಿರುವನಂತಪುರ ಆಸ್ಪತ್ರೆಗೆ ದಾಖಲಿಸಿ ಸತತ 10 ವರ್ಷ ಚಿಕಿತ್ಸೆ ನೀಡಲಾಗಿತ್ತು. ಅವರ ಆರೋಗ್ಯ ಸ್ಥಿತಿ ಸುಧಾರಿಸದ ಕಾರಣ ಮತ್ತು ಅವರಿಗೆ ಸ್ವಂತ ಸೂರಿಲ್ಲದ ಕಾರಣ ಅವರನ್ನು ಮಂಜೇಶ್ವರದ ಸ್ನೇಹಾಲಯಕ್ಕೆ ದಾಖಲಿಸಲಾಗಿತ್ತು. ಅಲ್ಲಿ ಬಿದ್ದು ಗಾಯಗೊಂಡಿದ್ದ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇತ್ತೀಚೆಗೆ ಕಾಞಂಗಾಡಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು. ಸೋಮವಾರ ಅವರು ನಿಧನರಾದರು.

ಈ ನಡುವೆ ಸಾವಿತ್ರಿ ಅವರ ಎಸ್‌ಎಸ್‌ಎಲ್‌ಸಿ ಬ್ಯಾಚ್‌ನ ವಿದ್ಯಾರ್ಥಿಗಳು ಅವರಿಗೊಂದು ಸ್ವಂತ ಮನೆ ನಿರ್ಮಿಸಿಕೊಡುವ ಪ್ರಯತ್ನ ನಡೆಸಿದ್ದರು. ಆದರೆ, ಮನೆ ನಿರ್ಮಾಣಕ್ಕೆ ಬೇಕಾದ ಜಾಗ ಕುಟುಂಬದ ಬಳಿ ಇಲ್ಲದ ಕಾರಣ ಅದು ಕೈಗೂಡಿರಲಿಲ್ಲ. ಇತ್ತೀಚೆಗೆ ಪಂಚಾಯಿತಿ ವತಿಯಿಂದ  ಲೈಫ್ ಯೋಜನೆಯಲ್ಲಿ ಅವರಿಗೆ ಮನೆ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಮಗಳನ್ನು ಸ್ವಂತ ಮನೆಗೆ ಕರೆದುಕೊಂಡು ಬಂದು ನೋಡಿಕೊಳ್ಳಬೇಕು ಎಂಬ ಮಹದಾಸೆ ತಾಯಿ ವಟ್ಟಿಚ್ಚಿ ಅವರಿಗಿತ್ತು. ಆದರೆ, ಅದಕ್ಕೂ ಮುನ್ನವೇ ಸಾವಿತ್ರಿ ನಿಧನರಾಗಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.