ADVERTISEMENT

ತರೂರ್ ವಿರುದ್ಧ ಕ್ರಮ: ರಾಹುಲ್‌ಗೆ ಬಿಜೆಪಿ ಒತ್ತಾಯ

ರಾಹುಲ್ ‘ಛದ್ಮವೇಷಧಾರಿ ಹಿಂದೂ’ ಎಂದು ಟೀಕಿಸಿದ ಸಂಬಿತ್ ಪಾತ್ರ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2018, 20:02 IST
Last Updated 29 ಅಕ್ಟೋಬರ್ 2018, 20:02 IST
ಉಜ್ಜೈನಿಯ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ಪೂಜೆ ಸಲ್ಲಿಸಿದರು. ಮುಖಂಡರಾದ ಕಮಲ್‌ನಾಥ್, ಜ್ಯೋತಿರಾದಿತ್ಯ ಸಿಂಧಿಯಾ ಇದ್ದಾರೆ –ಪಿಟಿಐ ಚಿತ್ರ
ಉಜ್ಜೈನಿಯ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ಪೂಜೆ ಸಲ್ಲಿಸಿದರು. ಮುಖಂಡರಾದ ಕಮಲ್‌ನಾಥ್, ಜ್ಯೋತಿರಾದಿತ್ಯ ಸಿಂಧಿಯಾ ಇದ್ದಾರೆ –ಪಿಟಿಐ ಚಿತ್ರ   

ಇಂದೋರ್: ಪ್ರಧಾನಿ ನರೇಂದ್ರ ಮೋದಿ ಅವರನ್ನು ಚೇಳಿಗೆ ಹೋಲಿಸಿ ಆರೋಪ ಮಾಡಿರುವ ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರನ್ನು ಪಕ್ಷದಿಂದ ಹೊರಹಾಕುವಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಬಿಜೆಪಿ ಆಗ್ರಹಿಸಿದೆ.

‘ಆರ್‌ಎಸ್‌ಎಸ್ ಪಾಲಿಗೆ ಪ್ರಧಾನಿ ನರೇಂದ್ರ ಮೋದಿ ಶಿವಲಿಂಗದ ಮೇಲಿರುವ ಚೇಳಿನಂತೆ. ಅದನ್ನು ಕೈಯಿಂದ ತೆಗೆದು ಬಿಸಾಡುವುದಕ್ಕೂ ಆಗಲ್ಲ, ಚಪ್ಪಲಿಯಿಂದ ಹೊಡೆಯಲೂ ಆಗಲ್ಲ' ಎಂದು ಶಶಿ ತರೂರ್ ನೀಡಿದ್ದ ಹೇಳಿಕೆ ವಿವಾದ ಸೃಷ್ಟಿಸಿತ್ತು.

ಸೋಮವಾರ ಉಜ್ಜೈನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದರು. ಚುನಾವಣೆ ನಿಗದಿಯಾಗಿರುವಮಧ್ಯಪ್ರದೇಶದಲ್ಲಿ ದೇಗುಲ ಯಾತ್ರೆ ಕೈಗೊಂಡಿರುವ ರಾಹುಲ್ ನಡೆಯನ್ನೂ ಬಿಜೆಪಿ ಟೀಕಿಸಿದೆ. ರಾಹುಲ್ ಅವರನ್ನು ‘ಛದ್ಮವೇಷಧಾರಿ ಹಿಂದೂ’ ಎಂದು ಬಿಜೆಪಿ ಮುಖಂಡ ಸಂಬಿತ್ ಪಾತ್ರ ಕರೆದಿದ್ದಾರೆ.

ADVERTISEMENT

ರಾಹುಲ್‌ಗೆ ಆಪ್ತರಾಗಿರುವ ತೂರರ್, ತಮ್ಮ ಹೇಳಿಕೆ ಮೂಲಕ ದೇಶದಾದ್ಯಂತ ಹಿಂದೂಗಳು ಆರಾಧಿಸುವ ಮಹಾದೇವನಿಗೆ ಮಾತ್ರವಲ್ಲದೇ ಪ್ರಧಾನಿಗೂ ಅಪಮಾನ ಎಸಗಿದ್ದಾರೆ ಎಂದು ಸಂಬಿತ್ ಆರೋಪಿಸಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ರಾಹುಲ್ ಗಾಂಧಿ ಅವರು ಮಹಾಕಾಳ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ನಾಯಕರು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುವ ಮೂಲಕ ಹಿಂದೂಗಳಿಗೆ ಅಗೌರವ ತೋರುತ್ತಿದ್ದಾರೆ ಎಂದಿರುವ ಅವರು ತರೂರ್ ಪರವಾಗಿ ಕ್ಷಮೆ ಕೇಳುವಂತೆ ರಾಹುಲ್‌ಗೆ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.