ರಾಹುಲ್ ಗಾಂಧಿ
–ಪಿಟಿಐ ಚಿತ್ರ
ನವದೆಹಲಿ: ರಾಹುಲ್ ಗಾಂಧಿ ತಮ್ಮ ಕುಟುಂಬದ ಅಪರಾಧಗಳನ್ನು ರಕ್ಷಣೆ ಮಾಡಲು ಲೋಕಸಭಾ ವಿರೋಧ ಪಕ್ಷದ ನಾಯಕನ ಸಾಂವಿಧಾನಿಕ ಹುದ್ದೆಯನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಶನಿವಾರ ಆಪಾದಿಸಿದೆ.
ತಮ್ಮ ಭಾವ ರಾಬರ್ಟ್ ವಾದ್ರಾ ವಿರುದ್ಧ ಇ.ಡಿ ಆರೋಪ ಪಟ್ಟಿ ಸಲ್ಲಿಸಿದ್ದನ್ನು ಉಲ್ಲೇಖಿಸಿ, ಅವರ ವಿರುದ್ಧ ಕೇಂದ್ರ ಸರ್ಕಾರ ದ್ವೇಷ ಸಾಧನೆ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಗುರಿಯಾಗಿಸಿಕೊಂಡು ಬಿಜೆಪಿ ಹೀಗೆ ಹೇಳಿದೆ.
ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಸುದಾಂಶು ತ್ರಿವೇದಿ, ‘ಇಂಡಿಯಾ ಮೈತ್ರಿಕೂಟದಲ್ಲಿ ಆಂತರಿಕ ಕಲಹವಿದ್ದು, ಮುಂಬರುವ ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ಮುನ್ನ ದುರ್ಬಲಗೊಂಡಿದೆ’ ಎಂದು ಹೇಳಿದ್ದಾರೆ.
ಹಿಂದಿ ಗೀತೆಯೊಂದನ್ನು ಉಲ್ಲೇಖಿಸಿ ವಿರೋಧ ಪಕ್ಷಗಳನ್ನು ಲೇವಡಿ ಮಾಡಿದ ಅವರು, ಮೈತ್ರಿಯ ಪರಿಸ್ಥಿತಿ ಈಗಲೇ ಸಂಕಷ್ಟದಲ್ಲಿದ್ದು, ಭವಿಷ್ಯದಲ್ಲಿ ಎಷ್ಟು ಕೆಟ್ಟದಾಗಿರಬಹುದು ಎಂದು ಯೋಚಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಇಂಡಿಯಾ ಮೈತ್ರಿಕೂಟದಿಂದ ಹೊರಬಂದಿದ್ದಾಗಿ ಆಮ್ ಆದ್ಮಿ ಪಕ್ಷ ಈಗಾಗಲೇ ಘೋಷಿಸಿದೆ. ಕೇರಳ ಸರ್ಕಾರವನ್ನು ಟೀಕಿಸಿದ ರಾಹುಲ್ ಗಾಂಧಿ ವಿರುದ್ಧ ಸಿಪಿಐಎಂ ಅಸಮಾಧಾನ ವ್ಯಕ್ತಪಡಿಸಿದೆ.
ವಾದ್ರಾ ಬಗೆಗಿನ ರಾಹುಲ್ ಗಾಂಧಿ ಅವರ ಪೋಸ್ಟ್ ಅನ್ನು ಉಲ್ಲೇಖಿಸಿ ತ್ರಿವೇದಿ, ‘ಸಾಂವಿಧಾನಿಕ ಹುದ್ದೆಯನ್ನು ಕುಟುಂಬದ ಅಪರಾಧಗಳ ರಕ್ಷಣೆಗೆ ಬಳಸಿಕೊಳ್ಳುತ್ತಿದ್ದಾರೆ’ ಎಂದರು.
ಸಮಾಜವನ್ನು ಭಾಷೆ, ಪ್ರಾದೇಶಿಕವಾಗಿ ವಿಭಜಿಸಿಯಾದರೂ ಸರಿ, ಕಾಂಗ್ರೆಸ್‌ನ ‘ಮೊದಲ ಕುಟುಂಬ’ ಹಣ ಹಾಗೂ ಅಧಿಕಾರಕ್ಕಾಗಿ ಹಾತೊರೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಕತ್ತಿನವರೆಗೆ ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್‌ನ ಮೊದಲ ಕುಟುಂಬವು, ಕುಟುಂಬದ ವಿಚಾರವನ್ನು ರಾಜಕೀಯಗೊಳಿಸುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.
ಛತ್ತೀಸಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಹಾಗೂ ಅವರ ಕುಟುಂಬಸ್ಥರ ಮೇಲಿನ ಇ.ಡಿ ದಾಳಿಯನ್ನು ಟೀಕಿಸಿದ ಸಂಸದೆ ಪ್ರಿಯಾಂಕಾ ಗಾಂಧಿಯವರನ್ನು ಉಲ್ಲೇಖಿಸಿದ ತ್ರಿವೇದಿ, ಗಾಂಧಿ ಕುಟುಂಬವು ಭ್ರಷ್ಟಾಚಾರಿಗಳನ್ನು ರಕ್ಷಣೆ ಮಾಡುತ್ತಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.