ರಾಹುಲ್ ಗಾಂಧಿ
(ಪಿಟಿಐ ಚಿತ್ರ)
ನವದೆಹಲಿ: ಭಾರತೀಯ ಚುನಾವಣಾ ಆಯೋಗದ ಮೇಲೆ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ‘2024ರ ಲೋಕಸಭಾ ಚುನಾವಣೆಯಲ್ಲಿ 70ರಿಂದ 100 ಸ್ಥಾನಗಳಲ್ಲಿ ಸಂಘಟಿತ ಅಕ್ರಮಗಳು ನಡೆದಿರುವ ಶಂಕೆ ಇದೆ. ನಮ್ಮ ಚುನಾವಣಾ ವ್ಯವಸ್ಥೆಯು ಈಗಾಗಲೇ ಸತ್ತಿದೆ‘ ಎಂದು ಕಿಡಿಕಾರಿದರು.
ಎಐಸಿಸಿ ಕಾನೂನು ಘಟಕದ ವತಿಯಿಂದ ವಿಜ್ಞಾನ ಭವನದಲ್ಲಿ ಶನಿವಾರ ನಡೆದ ‘ಸಾಂವಿಧಾನಿಕ ಸವಾಲುಗಳು: ದೃಷ್ಟಿಕೋನಗಳು ಮತ್ತು ಮಾರ್ಗಗಳು’ ಕುರಿತ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ‘2014ರ ಗುಜರಾತ್ ವಿಧಾನಸಭಾ ಚುನಾವಣೆಯ ಪ್ರಕ್ರಿಯೆಯಲ್ಲಿ ಏನೋ ತಪ್ಪಾಗಿದೆ ಎಂಬ ಅನುಮಾನ ಇತ್ತು. ಆದರೆ, ಇಲ್ಲಿಯವರೆಗೆ ಯಾವುದೇ ಪುರಾವೆಗಳು ಸಿಕ್ಕಿಲ್ಲ’ ಎಂದು ಹೇಳಿದರು.
‘ಚುನಾವಣಾ ಅಕ್ರಮಗಳ ಬಗ್ಗೆ ಕಾಂಗ್ರೆಸ್ ಈಗ ಶೇ 100ರಷ್ಟು ಪುರಾವೆ ಹೊಂದಿದೆ. ಅದು ಬಹಿರಂಗಗೊಂಡರೆ ಅಣು ಬಾಂಬ್ ಬೀಳಿಸಿದಂತೆ. ಚುನಾವಣಾ ಆಯೋಗ ಅಸ್ತಿತ್ವದಲ್ಲಿಲ್ಲ ಮತ್ತು ಕಣ್ಮರೆಯಾಗಿದೆ ಎಂದು ತೋರಿಸುವಂತಹ ಸಾಕ್ಷಿ ನಮ್ಮ ಪಕ್ಷದ ಬಳಿ ಇದೆ’ ಎಂದು ಅವರು ಹೇಳಿದರು.
‘ದೇಶದಲ್ಲಿ ಚುನಾವಣಾ ವ್ಯವಸ್ಥೆ ಈಗಾಗಲೇ ಸತ್ತುಹೋಗಿದೆ. 10-15 ಸ್ಥಾನಗಳಲ್ಲಿ ಅಕ್ರಮ ನಡೆದಿದ್ದರೂ ಭಾರತದ ಪ್ರಧಾನಿ ಅತ್ಯಂತ ಕಡಿಮೆ ಬಹುಮತ ಹೊಂದಿರುವ ಪ್ರಧಾನಿ. ವಾಸ್ತವವಾಗಿ ಆ ಸಂಖ್ಯೆ 70-80-100ಕ್ಕೆ ಹತ್ತಿರವಾಗಿದೆ ಎನ್ನುವುದು ನಮ್ಮ ಅನುಮಾನ. ಈ ಅಕ್ರಮಗಳು ನಡೆಯದಿದ್ದರೆ ಅವರು ಪ್ರಧಾನಿಯೇ ಆಗುತ್ತಿರಲಿಲ್ಲ‘ ಎಂದು ರಾಹುಲ್ ಅಭಿಪ್ರಾಯಪಟ್ಟರು.
‘ಲೋಕಸಭಾ ಚುನಾವಣೆಯಲ್ಲಿ ಹೇಗೆ ಅಕ್ರಮ ನಡೆಸಬಹುದು ಹಾಗೂ ಹೇಗೆ ನಡೆದಿದೆ ಎಂಬುದನ್ನು ನಾವು ಕೆಲವೇ ಕೆಲವು ದಿನಗಳಲ್ಲಿ ಸಾಬೀತುಪಡಿಸಲಿದ್ದೇವೆ. ಸಂವಿಧಾನ ರಕ್ಷಿಸುವ ಸಂಸ್ಥೆಯನ್ನು ಅಳಿಸಿಹಾಕಲಾಗಿದೆ ಮತ್ತು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ’ ಎಂದು ಅವರು ಹೇಳಿದರು.
ಈ ಬಗ್ಗೆ ಪುರಾವೆಗಳನ್ನು ಹುಡುಕಲು ಆರು ತಿಂಗಳ ನಿರಂತರ ಕೆಲಸ ಮಾಡಲಾಗಿದೆ. 6.5 ಲಕ್ಷ ಮತದಾರರಲ್ಲಿ 1.5 ಲಕ್ಷ ಮತದಾರರು ಭಾವಚಿತ್ರಗಳು ಮತ್ತು ಹೆಸರುಗಳನ್ನು ಹೋಲಿಸಿದ ನಂತರ ನಕಲಿ ಎಂಬುದು ಗೊತ್ತಾಗಿದೆ ಎಂದು ಅವರು ಹೇಳಿದರು. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕದ ವಿಧಾನಸಭಾ ಕ್ಷೇತ್ರದ ಮತ ಕಳವು ಪ್ರಕರಣ ಉಲ್ಲೇಖಿಸಿ ಅವರು ಈ ಮಾತು ಹೇಳಿದರು.
‘2014ರಿಂದಲೂ ಏನೋ ತಪ್ಪಾಗಿದೆ ಎಂಬ ಅನುಮಾನ ನನಗಿತ್ತು. ವಾಸ್ತವವಾಗಿ, ನಾನು ಇನ್ನೂ ಮುಂದೆ ಹೋಗುತ್ತೇನೆ. ಗುಜರಾತ್ ವಿಧಾನಸಭಾ ಚುನಾವಣೆಯ ಬಗ್ಗೆ ಆಗಲೇ ಅನುಮಾನ ಮೂಡಿತ್ತು. ನಾವು ದತ್ತಾಂಶ ಬಿಡುಗಡೆ ಮಾಡಿದಾಗ ಚುನಾವಣಾ ವ್ಯವಸ್ಥೆಯಲ್ಲಿ ಆಘಾತ ತರಂಗವು ಹಾದುಹೋಗುವುದನ್ನು ನೀವು ನೋಡುತ್ತೀರಿ. ಇದು ಅಕ್ಷರಶಃ ಪರಮಾಣು ಬಾಂಬ್‌ನಂತಿರಲಿದೆ’ ಎಂದರು.
‘ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ನಂತರ ಈ ವಿಷಯವನ್ನು ಗಂಭೀರವಾಗಿ ನೋಡಲು ಪ್ರಾರಂಭಿಸಿದೆ. ಕಾಂಗ್ರೆಸ್, ಶಿವಸೇನೆ (ಉದ್ಧವ್ ಬಣ) ಮತ್ತು ಎನ್‌ಸಿಪಿ (ಶರದ್ ಪವಾರ್ ಬಣ) ಎಂಬ ಮೂರು ಅಸಾಧಾರಣ ಪಕ್ಷಗಳು ಲೋಕಸಭಾ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದವು. ಆದರೆ, ಕೆಲವು ತಿಂಗಳುಗಳ ಬಳಿಕ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆವಿಯಾದವು‘ ಎಂದು ಅವರು ವಿಶ್ಲೇಷಿಸಿದರು.
ರಫೇಲ್ ಒಪ್ಪಂದದ ಕುರಿತ ಹೋರಾಟ ಉಲ್ಲೇಖಿಸಿದ ಅವರು, ‘ಹೋರಾಟ ಸುಲಭವಲ್ಲ’ ಎಂದರು. ಪ್ರಧಾನಿ ಕಚೇರಿ ಮತ್ತು ಎನ್‌ಎಸ್‌ಎ ರಫೇಲ್ ಒಪ್ಪಂದದಲ್ಲಿ ಮಧ್ಯಪ್ರವೇಶಿಸಿ, ರಫೇಲ್ ಒಪ್ಪಂದವನ್ನು ತಿರುಚಿವೆ ಎಂದು ದಾಖಲೆ ಸ್ಪಷ್ಟವಾಗಿ ಹೇಳುತ್ತದೆ. ಈ ದಾಖಲೆಯು ಪ್ರಪಂಚದ ಯಾವುದೇ ದೇಶದಲ್ಲಿ ಯಾವುದೇ ಸರ್ಕಾರವನ್ನು ಉರುಳಿಸುತ್ತಿತ್ತು ಎಂದು ಅವರು ತಿಳಿಸಿದರು.
‘ರಫೇಲ್ ಪ್ರಕರಣದಲ್ಲಿ ಏನೂ ಆಗಲಿಲ್ಲ. ದಾಖಲೆ ಎಲ್ಲಿಗೆ ಹೋಯಿತು ಎಂದು ನಿಮಗೆ ತಿಳಿದಿದೆ. ನಾನು 30 ಪ್ರಕರಣಗಳ ವಿರುದ್ಧ ಹೋರಾಡುತ್ತಿದ್ದೇನೆ. ಆಡಳಿತ ವ್ಯವಸ್ಥೆಯ ವಿರುದ್ಧ ಹೋರಾಟ ಆರಂಭಿಸಿದ ಕ್ಷಣವೇ ನಿಮ್ಮ ಮೇಲೆ ದಾಳಿ ಆರಂಭವಾಗುತ್ತದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ನಡೆಸಿದ ಸಂಭಾಷಣೆಯನ್ನು ರಾಹುಲ್ ನೆನಪಿಸಿಕೊಂಡರು. ‘ನೀನು ಬೆಂಕಿಯೊಂದಿಗೆ ಆಟವಾಡುತ್ತಾ ಇದ್ದೀಯಾ ಎಂದು ಪ್ರಿಯಾಂಕಾ ಹೇಳಿದರು. ಬೆಂಕಿಯೊಂದಿಗೆ ಆಟವಾಡಲು ನನಗೆ ಯಾವುದೇ ಭಯವಿಲ್ಲ. ಹಾಗಾಗಿ ಹೋರಾಟ ಮುಂದುವರಿಸುತ್ತೇನೆ ಎಂಬುದಾಗಿ ಪ್ರತಿಕ್ರಿಯಿಸಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.