ADVERTISEMENT

ರಾಹುಲ್‌, ಪ್ರಿಯಾಂಕಾ ಕೋವಿಡ್‌ ಲಸಿಕೆ ಹಾಕಿಸಿಕೊಂಡಿದ್ದಾರೆಯೇ?: ಬಿಜೆಪಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 27 ಮೇ 2021, 11:27 IST
Last Updated 27 ಮೇ 2021, 11:27 IST
ಸಂಬೀತ್‌ ಪಾತ್ರಾ
ಸಂಬೀತ್‌ ಪಾತ್ರಾ   

ನವದೆಹಲಿ: ಕೋವಿಡ್‌ 19 ಸೋಂಕಿನಿಂದ ಸತ್ತವರ ಸಂಖ್ಯೆಯನ್ನು ಕೇಂದ್ರ ಸರ್ಕಾರ ಸುಳ್ಳು ಹೇಳುತ್ತಿದೆ ಎಂಬ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಕ್ಕೆ 'ರಾಹುಲ್‌ ಗಾಂಧಿಗೆ ಏನೂ ಗೊತ್ತಿಲ್ಲ. ಆದರೆ ಎಲ್ಲ ಗೊತ್ತಿರುವವರಂತೆ ಮಾತನಾಡುತ್ತಾರೆ' ಎಂದು ಬಿಜೆಪಿ ಪ್ರತ್ಯುತ್ತರ ನೀಡಿದೆ.

ನ್ಯೂಯಾರ್ಕ್‌ ಟೈಮ್ಸ್‌ನ ಪಟ್ಟಿಯೊಂದನ್ನು ಬುಧವಾರ ಟ್ವೀಟ್‌ ಮಾಡಿದ್ದ ರಾಹುಲ್‌ ಗಾಂಧಿ 'ಸಂಖ್ಯೆಗಳು ಸುಳ್ಳು ಹೇಳುವುದಿಲ್ಲ. ಆದರೆ ಭಾರತ ಸರ್ಕಾರ ಹೇಳುತ್ತದೆ' ಎಂದು ಆರೋಪಿಸಿದ್ದರು.

ಇದಕ್ಕೆ ಸಂಬಂಧಿಸಿ ವರ್ಚುವಲ್‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಸಂಬೀತ್‌ ಪಾತ್ರಾ, 'ಮೊದಲು ಪ್ರತಿಪಕ್ಷ ಆಡಳಿತವಿರುವ ಮಹರಾಷ್ಟ್ರಗಳಂತಹ ರಾಜ್ಯಗಳ ಅಂಕಿಸಂಖ್ಯೆಯನ್ನು ಗಮನಿಸಬೇಕು ಎಂದಿದ್ದಾರೆ.

ADVERTISEMENT

'ಕಾಂಗ್ರೆಸ್‌ ಅಧಿಕಾರದಲ್ಲಿರುವ ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಸಂಖ್ಯೆಯ ಮರಣಗಳು ಸಂಭವಿಸಿವೆ. ವಾಸ್ತವದಲ್ಲಿ ಸತ್ತವರ ಸಂಖ್ಯೆಗೂ ರಾಜಸ್ಥಾನ ಸರ್ಕಾರ ನೀಡಿರುವ ಸಂಖ್ಯೆಗೂ ಭಾರಿ ವ್ಯತ್ಯಾಸವಿದೆ. ರಾಹುಲ್‌ ಗಾಂಧಿ ಟ್ವೀಟ್‌ ಗೇಮ್‌ ಆಡುವ ಬದಲು ಕಾಂಗ್ರೆಸ್‌ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಫೋನ್‌ ಮಾಡಿ ಮಾತನಾಡಲಿ. ಕಾಂಗ್ರೆಸ್‌ ನಾಯಕರು ಸುಳ್ಳುಗಳನ್ನು ಹರಡುವುದಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ' ಎಂದು ಸಂಬೀತ್‌ ಪಾತ್ರಾ ಆರೋಪಿಸಿದ್ದಾರೆ.

'ರಾಹುಲ್‌ ಗಾಂಧಿ ನೆಲಕ್ಕಿಳಿಯುವುದಿಲ್ಲ. ಯಾವುದೇ ಸೇವಾ ಕಾರ್ಯವನ್ನು ಮಾಡುವುದಿಲ್ಲ. ಬದಲಾಗಿ ದಿನಕ್ಕೊಂದು ಟ್ವೀಟ್‌ ಮಾಡಿಕೊಂಡು ಕೂರುತ್ತಾರೆ. ದಿನಕ್ಕೆ ಒಂದು ಟ್ವೀಟ್‌ ಮಾಡಿದರೆ ಕೊರೊನಾ ಹೋಗುವುದಿಲ್ಲ. ಕಾಂಗ್ರೆಸ್‌ ಅಧಿಕಾರದಲ್ಲಿರುವ ಸಿಎಂಗಳ ಜೊತೆ ಮಾತನಾಡಿ ಸರಿಯಾದ ದಾಖಲೆಗಳನ್ನು ತರಿಸಿಕೊಳ್ಳಲಿ' ಎಂದು ಸಂಬೀತ್‌ ಪಾತ್ರಾ ಹೇಳಿದ್ದಾರೆ.

'ಈ ಹಿಂದೆ ಕಾಂಗ್ರೆಸ್‌ ನಾಯಕರು ಕೊರೊನಾ ಲಸಿಕೆ ಬಗ್ಗೆ ಲಘುವಾಗಿ ಮಾತನಾಡಿದ್ದರು. ಇದರಿಂದ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಹಿನ್ನಡೆ ಉಂಟಾಯಿತು. ಕೋವ್ಯಾಕ್ಸಿನ್‌ಗೆ ಕಾಂಗ್ರೆಸ್‌ ಪಕ್ಷದ ಸಿಎಂಗಳು ಅನುಮತಿ ನಿರಾಕರಿಸಿದ್ದರು' ಎಂದು ಆರೋಪಿಸಿದ ಪಾತ್ರ, 'ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಲಸಿಕೆಯನ್ನು ಪಡೆದುಕೊಂಡಿದ್ದಾರೆಯೇ ಅಥವಾ ಇಲ್ಲವೇ?' ಎಂಬ ಪ್ರಶ್ನೆಯನ್ನು ಮುಂದಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.