ರಾಯಪುರ: ಛತ್ತೀಸಗಢ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಶ್ವಾಸನೆ ನೀಡುವುದನ್ನು ಮುಂದುವರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದ ಜನರಿಗೆ ₹10 ಲಕ್ಷದವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲಾಗುವುದು ಎಂದು ಘೋಷಿಸಿದ್ದಾರೆ.
ರಾಜ್‌ನಂದಗಾಂವ್ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಭೂರಹಿತ ಗ್ರಾಮೀಣ ಕಾರ್ಮಿಕರಿಗೆ ವರ್ಷಕ್ಕೆ ₹10,000 ಸಹಾಯಧನ ನೀಡುವುದಾಗಿ ಭರವಸೆ ನೀಡಿದ್ದಾರೆ.
‘ದೇಶದಲ್ಲಿ ಎರಡು ರೀತಿಯ ಸರ್ಕಾರಗಳಿವೆ. ಒಂದು ದೇಶದ ಶ್ರೀಮಂತರಿಗಾಗಿ (ಬಿಜೆಪಿ) ಮಾತ್ರ ಕೆಲಸ ಮಾಡುತ್ತದೆ. ಇನ್ನೊಂದು (ಕಾಂಗ್ರೆಸ್) ದೇಶದ ರೈತರು, ಕಾರ್ಮಿಕರು ಮತ್ತು ಯುವಕರಿಗಾಗಿ ಕೆಲಸ ಮಾಡುತ್ತದೆ. ಮತದಾರರು ನಿಮಗೆ ಯಾವ ಸರ್ಕಾರ ಬೇಕು ಎಂಬುದನ್ನು ನೀವೇ ನಿರ್ಧರಿಸಬೇಕು’ ಎಂದು ಕರೆ ನೀಡಿದ್ದಾರೆ.
ಎರಡು ಹಂತದಲ್ಲಿ ಚುನಾವಣೆ
90 ಸದಸ್ಯ ಬಲದ ಛತ್ತೀಸಗಢ ವಿಧಾನಸಭೆಗೆ ನವೆಂಬರ್ 7 ಹಾಗೂ 17ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ 20 ಕ್ಷೇತ್ರಗಳಿಗೆ ಮತ್ತು 2ನೇ ಹಂತದಲ್ಲಿ 70 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಡಿಸೆಂಬರ್ 3ರಂದು ಮತ ಎಣಿಕೆ ನಡೆಯಲಿದೆ.
ರಾಜ್ಯದಲ್ಲಿ ಸದ್ಯ ಕಾಂಗ್ರೆಸ್ ಅಧಿಕಾರದಲ್ಲಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಈಗಾಗಲೇ ಅಭ್ಯರ್ಥಿಗಳನ್ನು ಘೋಷಿಸಿವೆ.
2018ರಲ್ಲಿ ಬಿಜೆಪಿಗೆ ಮುಖಭಂಗ
2003ರಿಂದ 2018ರ ವರೆಗೆ ಸತತ ಮೂರು ಬಾರಿ ಆಡಳಿತ ನಡೆಸಿದ್ದ ಬಿಜೆಪಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿತ್ತು. ಕೇವಲ 15 ಸ್ಥಾನಗಳನ್ನು ಜಯಿಸುವುದರೊಂದಿಗೆ ಅಧಿಕಾರದಿಂದ ಕೆಳಗಿಳಿದಿತ್ತು.
2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 68 ಕ್ಷೇತ್ರಗಳಲ್ಲಿ ಜಯ ಗಳಿಸಿ ಭಾರಿ ಬಹುಮತ ಸಾಧಿಸಿತ್ತು. ಜೆಸಿಸಿ ಮತ್ತು ಬಿಎಸ್‌ಪಿ ಪಕ್ಷಗಳು ಕ್ರಮವಾಗಿ 5 ಹಾಗೂ 2 ಸ್ಥಾನ ಜಯಿಸಿದ್ದವು.
ಪ್ರಸ್ತುತ ವಿಧಾನಸಭೆಯಲ್ಲಿ ಕಾಂಗ್ರೆಸ್ 71 ಸದಸ್ಯರ ಬಲ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.