ನರೇಂದ್ರ ಮೋದಿ, ರಾಹುಲ್ ಗಾಂಧಿ, ತೇಜಸ್ವಿ ಯಾದವ್
(ಪಿಟಿಐ ಚಿತ್ರ)
ನವದೆಹಲಿ, ಪಟ್ನಾ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಬಿಹಾರದಲ್ಲಿ ನಡೆಯುತ್ತಿರುವ ‘ಮತ ಅಧಿಕಾರ ಯಾತ್ರೆ’ಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ದಿವಂಗತ ತಾಯಿಯ ಬಗ್ಗೆ ಅವಹೇಳನಕಾರಿ ಮತ್ತು ನಿಂದನಾತ್ಮಕ ಪದಗಳನ್ನು ಬಳಕೆ ಮಾಡಲಾಗುತ್ತಿದೆ. ಈ ಯಾತ್ರೆಯು ‘ಅವಮಾನ, ದ್ವೇಷ ಮತ್ತು ಸದಭಿರುಚಿ’ಯ ಎಲ್ಲೆಗಳನ್ನು ಮೀರಿದೆ ಎಂದು ಬಿಜೆಪಿ ಆರೋಪಿಸಿದೆ.
ತನ್ನ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಬಿಜೆಪಿ ಪೋಸ್ಟ್ ಮಾಡಿದ್ದು, ಅಪರಿಚಿತ ವ್ಯಕ್ತಿಗಳು ಹಿಂದಿಯಲ್ಲಿ ಮೋದಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ತುಣುಕುಗಳನ್ನು ಪ್ರಸ್ತಾಪಿಸಿದೆ.
ಬುಧವಾರ ದರ್ಭಾಂಗ್ ಜಿಲ್ಲೆಯಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ, ತೇಜಸ್ವಿ ಯಾದವ್ ಅವರು ಯಾತ್ರೆ ನಡೆಸುತ್ತಿದ್ದ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ರ‍್ಯಾಲಿಯಲ್ಲಿ ‘ಅಶ್ಲೀಲ ಭಾಷೆ’ಯನ್ನು ಬಳಸಿದ್ದು, ಅವುಗಳನ್ನು ಸಾರ್ವಜನಿಕವಾಗಿ ಪುನರಾವರ್ತಿಸಲು ಆಗದು. ಇದರ ಹಿಂದೆ ರಾಹುಲ್ ಮತ್ತು ತೇಜಸ್ವಿ ಇದ್ದಾರೆ. ಇಂತಹ ಕೀಳುಮಟ್ಟದ ರಾಜಕಾರಣ ಯಾವತ್ತೂ ನೋಡಿಲ್ಲ’ ಎಂದು ಬಿಜೆಪಿ ಟೀಕಿಸಿದೆ.
ಮೋದಿಯವರ ದಿವಂಗತ ತಾಯಿ ಬಗ್ಗೆ ಬಳಸಿರುವ ಅವಾಚ್ಯ ಪದಗಳು ವಿರೋಧಪಕ್ಷಗಳ ಹತಾಶ ಸ್ಥಿತಿಯನ್ನು ತೋರಿಸುತ್ತದೆ. ಎಷ್ಟೇ ಬಾರಿ ಕ್ಷಮೆ ಕೇಳಿದರೂ ಬಿಹಾರದ ಜನರು ವಿಪಕ್ಷಗಳನ್ನು ಕ್ಷಮಿಸುವುದಿಲ್ಲ. ನಾವು ರಾಹುಲ್, ತೇಜಸ್ವಿ ಯಾದವ್ ವಿರುದ್ಧ ಪೊಲೀಸ್ ಠಾಣೆಗೂ ದೂರು ನೀಡುತ್ತೇವೆ ಎಂದು ದರ್ಭಾಂಗ್ ಜಿಲ್ಲಾ ಬಿಜೆಪಿ ಅಧ್ಯಕ್ಷ ಆದಿತ್ಯ ನಾರಾಯಣ್ ಝಾ ತಿಳಿಸಿದ್ದಾರೆ.
ಬಿಜೆಪಿಯ ಈ ಆರೋಪಕ್ಕೆ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಪ್ರತಿಕ್ರಿಯಿಸಿದ್ದು, ‘ಸುಮಾರು ಅರ್ಧ ಡಜನ್ ಪಕ್ಷಗಳ ಕಾರ್ಯಕರ್ತರು ಭಾಗಿಯಾಗಿದ್ದರು. ಯಾರು ಆ ಪದಗಳನ್ನಾಡಿದ್ದಾರೆ ಎಂದು ಹೇಗೆ ತಿಳಿಯುತ್ತದೆ‘ ಎಂದಿದ್ದಾರೆ.
ಮೋದಿ ತಾಯಿಯ ಅವಹೇಳನ; ಬಿಜೆಪಿಯಿಂದ ಎಫ್‌ಐಆರ್
ನವದೆಹಲಿ/ಪಟ್ನಾ: ರಾಹುಲ್ ಗಾಂಧಿ ಅವರ ‘ವೋಟ್ ಅಧಿಕಾರ್ ಯಾತ್ರೆ’ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಯನ್ನು ಅವಹೇಳನ ಮಾಡಿದ ಆರೋಪದ ಮೇಲೆ ಬಿಜೆಪಿಯ ರಾಜ್ಯ ನಿಯೋಗವು ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ದರ್ಭಾಂಗದಲ್ಲಿ ನಡೆದ ರ‍್ಯಾಲಿಯಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಪ್ರಿಯಾಂಕ ವಾದ್ರಾ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಭಾಗವಹಿಸಿದ್ದರು. ಅವರು ಅಲ್ಲಿಂದ ಹೊರಟುಹೋದ ಬಳಿಕ ಕೆಲವು ನಾಯಕರು ಪ್ರಧಾನಿ ತಾಯಿ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಹಾರದ ಉಪ ಮುಖ್ಯಮಂತ್ರಿ ಸಮರ್ಥ್ ಚೌಧರಿ ‘ಜನ ಸಾಮೂಹದ ವರ್ತನೆಯು ಆರ್‌ಜೆಡಿಯ ಗೂಂಡಾಗಿರಿಯ ಲಕ್ಷಣವಾಗಿತ್ತು. ಕಾಂಗ್ರೆಸ್ ಪಕ್ಷವು ಕುರುಡು ಅಧಿಕಾರದ ಅನ್ವೇಷಣೆಯಲ್ಲಿ ರೌಡಿ ವರ್ತನೆಗೆ ಪ್ರಚೋದಿಸುತ್ತಿದೆ’ ಎಂದು ಕಿಡಿಕಾರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.