
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗುರುವಾರ ರಾಷ್ಟ್ರೀಯ ನರೇಗಾ ಕಾರ್ಮಿಕರ ಸಮ್ಮೇಳನದಲ್ಲಿ ಭಾಗವಹಿಸಿ, ಪಿಕಾಸಿ ಹಿಡಿದು ಜನರತ್ತ ಕೈಬೀಸಿದರು
–ಪಿಟಿಐ ಚಿತ್ರ
ನವದೆಹಲಿ: ‘ಈ ಹಿಂದೆ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿದಾಗ ಕೇಂದ್ರ ಸರ್ಕಾರಕ್ಕೆ ಇದ್ದ ಉದ್ದೇಶವೇ ಈಗ ನರೇಗಾವನ್ನು ಬದಲಿಸುವುದರ ಹಿಂದೆಯೂ ಇದೆ. ಅಂದಿನ ಆ ರೈತರ ಹೋರಾಟದಿಂದ ಪ್ರೇರಣೆ ಪಡೆದು, ನರೇಗಾವನ್ನು ವಾಪಸ್ ಪಡೆದುಕೊಳ್ಳಬೇಕು’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕಾರ್ಮಿಕರಿಗೆ ಕರೆ ನೀಡಿದರು.
ಕಾಂಗ್ರೆಸ್‌ನ ‘ರಚನಾತ್ಮಕ್ ಕಾಂಗ್ರೆಸ್’ ವಿಭಾಗವು ಗುರುವಾರ ಇಲ್ಲಿ ಆಯೋಜಿಸಿದ್ದ ‘ರಾಷ್ಟ್ರೀಯ ನರೇಗಾ ಕಾರ್ಮಿಕರ ಸಮ್ಮೇಳನ’ದಲ್ಲಿ ಅವರು ಮಾತನಾಡಿದರು.
ದೇಶದ ವಿವಿಧ ಭಾಗಗಳಿಂದ ಬಂದಿದ್ದ ಕಾರ್ಮಿಕರು, ತಾವು ಕೆಲಸ ಮಾಡುವ ಜಮೀನುಗಳಿಂದ ಒಂದು ಮುಷ್ಟಿ ಮಣ್ಣು ತಂದಿದ್ದರು. ಸಮ್ಮೇಳನ ನಡೆದ ಜಾಗದಲ್ಲಿದ್ದ ಹೂವಿನ ಕುಂಡಗಳಿಗೆ ಆ ಮಣ್ಣನ್ನು ಹಾಕಲಾಯಿತು.
‘ಮೂರು ಕರಾಳ ಕೃಷಿ ಕಾನೂನು ತರಲು ಮೋದಿ ಸರ್ಕಾರವು ಕೆಲವು ವರ್ಷಗಳ ಹಿಂದೆ ಪ್ರಯತ್ನಿಸಿತ್ತು. ಇದನ್ನು ರೈತರು ತಡೆದರು. ನನಗೆ ಇನ್ನೂ ನೆನಪಿದೆ. ಈ ಕಾನೂನು ಹಿಂಪಡೆಯುವಂತೆ ಸಂಸತ್ತಿನಲ್ಲಿ, ಬೀದಿಗಳಲ್ಲಿ ರೈತರೊಂದಿಗೆ ಸೇರಿಕೊಂಡು ನಾವೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿದ್ದೆವು. ರೈತರ ಮೇಲೆ ಏನು ಮಾಡಲು ಹೊರಟರೋ ಈಗ ಕಾರ್ಮಿಕರಿಗೂ ಅದನ್ನೇ ಮಾಡಲು ಕೇಂದ್ರ ಹೊರಟಿದೆ’ ಎಂದರು.
‘ಅವರನ್ನು ತಡೆಯಲು ಒಂದೇ ಮಾರ್ಗವಿದೆ. ರೈತರು ತೋರಿಸಿದ ದಾರಿ ನಮ್ಮ ಮುಂದಿದೆ. ನಾವು ಒಟ್ಟುಗೂಡಿ ದೃಢವಾಗಿ ನಿಲ್ಲಬೇಕು. ಅವರು (ಕೇಂದ್ರ) ಹೆದರುಪುಕ್ಕರು. ನನಗೆ ಅವರ ಬಗ್ಗೆ ಚೆನ್ನಾಗಿಯೇ ತಿಳಿದಿದೆ. ನಾವು ಒಂದಾದರೆ ಯೋಜನೆಯ ಹೆಸರನ್ನು, ಯೋಜನೆ ಹೇಗಿರಬೇಕು ಎಂಬುದನ್ನು ನಾವೇ ನಿರ್ಧರಿಸಬಹುದು’ ಎಂದರು.
‘ಆದರೆ, ನಮ್ಮಲ್ಲಿ ಒಂದು ಸಮಸ್ಯೆ ಇದೆ. ಬಡವರು ಒಂದಾಗಿ ನಿಲ್ಲುವುದಿಲ್ಲ; ಈಗ ಒಂದಾಗಲೇ ಬೇಕಿದೆ. ಸಂವಿಧಾನದ ಮೇಲೆ ಮತ್ತು ಭಾರತ ಎಂಬ ಸಿದ್ಧಾಂತದ ಮೇಲೆ ನಂಬಿಕೆ ಇರುವ ಬಡ ಜನರು ಒಗ್ಗೂಡುವ ಸಮಯವಿದು. ನರೇಗಾ ಚಳವಳಿಯು ದೊಡ್ಡ ಅವಕಾಶವಾಗಿ ನಮಗೆ ಒದಗಿಬಂದಿದೆ. ಎಲ್ಲರೂ ಒಗ್ಗಟ್ಟಾದರೆ, ಮೋದಿ ಅವರು ನರೇಗಾವನ್ನು ವಾಪಸು ಜಾರಿ ಮಾಡುತ್ತಾರೆ’ ಎಂದರು.
‘ಹೊಸ ಕಾನೂನಿನ ಹೇಸರೇನದು...?’
* ‘ಕೃಷಿ ಕಾನೂನುಗಳು ಸಂವಿಧಾನದ ಮೇಲಿನ ದಾಳಿಯಾಗಿತ್ತು. ಅದೇ ರೀತಿ ನೋಟು ರದ್ದತಿ ಮತ್ತು ತಪ್ಪು ಜಿಎಸ್‌ಟಿ ಕೂಡ ಸಂವಿಧಾನದ ಮೇಲಿನ ದಾಳಿಯೇ ಆಗಿದೆ. ಈಗ ಹೊಸ ಕಾನೂನಿನ ಹೆಸರೇನದು...? ನನಗೆ ಗೊತ್ತಿಲ್ಲ’ ಎಂದು ರಾಹುಲ್ ಗಾಂಧಿ ಅವರು ಹೇಳುತ್ತಿದ್ದಂತೆಯೇ ವೇದಿಕೆ ಮುಂಬದಿ ಇದ್ದವರು ಜಿ ರಾಮ್ ಜಿ ಎಂದು ಕೂಗಿದರು
* ಭಾರತವನ್ನು ಸ್ವಾತಂತ್ರ ಪೂರ್ವದ ಕಾಲಕ್ಕೆ ತಳ್ಳಲು ಇವರು ಯತ್ನಿಸುತ್ತಿದ್ದಾರೆ. ಆ ಕಾಲದಲ್ಲಿ ರಾಜರೇ ಎಲ್ಲವನ್ನೂ ನಿರ್ಧರಿಸುತ್ತಿದ್ದರು. ತಮ್ಮ ಬಳಿಯೇ ಎಲ್ಲ ಸಂಪತ್ತನ್ನು ಇಟ್ಟುಕೊಂಡಿರುತ್ತಿದ್ದರು. ತಮಗೆ ಇಷ್ಟ ಬಂದ ರೀತಿಯಲ್ಲಿ ಸಂಪತ್ತು ಗಳಿಸುತ್ತಿದ್ದರು. ಇಂಥ ಯೋಜನೆಗಳು ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಅವರು (ಕೇಂದ್ರ) ನಿಲ್ಲಿಸುವುದಿಲ್ಲ. ಯಾಕೆಂದರೆ ಆಧುನಿಕ ಭಾರತದ ಸಂರಚನೆಯನ್ನು ಬದಲಾಯಿಸುವುದು ಅವರ ಉದ್ದೇಶ ಎಂದು ರಾಹುಲ್ ಗಾಂಧಿ ಹೇಳಿದರು.
* ದೇಶದ ಸಂಪತ್ತು ಶ್ರೀಮಂತರ ಕೈ ಸೇರಬೇಕು. ದಲಿತರು ಹಿಂದುಳಿದ ವರ್ಗದವರು ಬುಡಕಟ್ಟು ಜನರು ಅದಾನಿ–ಅಂಬಾನಿ ಅವರಂಥ ಶ್ರೀಮಂತರ ಮೇಲೆ ಅವಲಂಬಿತರಾಗಬೇಕು. ಇವರ ಆದೇಶಗಳನ್ನು ಪಾಲಿಸಬೇಕು ಇಲ್ಲವಾದಲ್ಲಿ ಹಸಿವಿನಿಂದ ಸಾಯಬೇಕು. ಇದು ಬಿಜೆಪಿಯ ಸಿದ್ಧಾಂತ ಎಂದು ರಾಹುಲ್ ಕಿಡಿಕಾರಿದರು.
ಜನರ ಸ್ಮೃತಿಯಿಂದ ಗಾಂಧಿ ಹೆಸರನ್ನು ಅಳಿಸುವುದು ಗ್ರಾಮ ಸ್ವರಾಜ್ಯ ಪರಿಕಲ್ಪನೆಯನ್ನು ಬಲಹೀನಗೊಳಿಸುವುದು ನರೇಗಾವನ್ನು ಬದಲಾಯಿಸಿರುವುದರ ಹಿಂದಿನ ಉದ್ದೇಶ. ಮುಂಬರುವ ಬಜೆಟ್ ಅಧಿವೇಶನದಲ್ಲಿ ಈ ಬಗ್ಗೆ ಹೋರಾಡುತ್ತೇವೆ.- ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.