ADVERTISEMENT

ಡೋಕ್ಲಾಮ್ ವೇಳೆ ಚೀನಾ ಅಧಿಕಾರಿಗಳೊಂದಿಗೆ ಸೂಪ್ ಸೇವಿಸುತ್ತಿದ್ದ ರಾಹುಲ್: ಅನುರಾಗ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಡಿಸೆಂಬರ್ 2022, 9:45 IST
Last Updated 17 ಡಿಸೆಂಬರ್ 2022, 9:45 IST
ಅನುರಾಗ್ ಠಾಕೂರ್
ಅನುರಾಗ್ ಠಾಕೂರ್   

ನವದೆಹಲಿ: ಡೋಕ್ಲಾಮ್ ಘಟನೆ ವೇಳೆ ಭಾರತೀಯ ಯೋಧರು ಹೋರಾಡುತ್ತಿದ್ದ ಸಂದರ್ಭದಲ್ಲಿ ರಾಹುಲ್ ಗಾಂಧಿ ಚೀನಾದ ಅಧಿಕಾರಿಗಳೊಂದಿಗೆ ಸೂಪ್ ಸೇವಿಸುತ್ತಿದ್ದರು ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಟೀಕೆ ಮಾಡಿದ್ದಾರೆ.

ಈ ಕುರಿತು ಅನುರಾಗ್ ಠಾಕೂರ್ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ 'ಎಎನ್‌ಐ' ಟ್ವೀಟ್ ಮಾಡಿದೆ.

ಇತ್ತೀಚೆಗೆ ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನ ವಾಸ್ತವ ಗಡಿ ರೇಖೆ ಬಳಿ ಭಾರತ ಹಾಗೂ ಚೀನಾ ಸೈನಿಕರೊಂದಿಗೆ ಸಂಘರ್ಷ ನಡೆದಿತ್ತು. ಈ ಸಂಬಂಧ ಚೀನಾದೊಂದಿಗೆ ಮೃದು ಧೋರಣೆ ತಳೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರವನ್ನು ರಾಹುಲ್ ಗಾಂಧಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.

ADVERTISEMENT

ಈ ಹಿನ್ನೆಲೆಯಲ್ಲಿ ರಾಹುಲ್‌ಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್, ಕಾಂಗ್ರೆಸ್‌ಗೆ ಭಾರತೀಯ ಸೇನೆ ಮೇಲೆ ನಂಬಿಕೆ ಇಲ್ಲ. ಪಾಕಿಸ್ತಾನದ ಮೇಲೆ ಸರ್ಜಿಕಲ್ ದಾಳಿ ನಡೆಸಿದಾಗಲೂ ಅವರು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದರು ಎಂದು ಹೇಳಿದರು.

ಇದು 1962ರ ಭಾರತವಲ್ಲ. ಇದು 2014ರ ಭಾರತ. ಪ್ರಧಾನಿ ಮೋದಿ ಮುಂದಾಳತ್ವದಲ್ಲಿ ಭಾರತ ಮುನ್ನಡೆಯುತ್ತಿದೆ. ಯುಪಿಎ ಸರ್ಕಾರಕ್ಕೆ 10 ವರ್ಷಗಳಲ್ಲಿ ನಮ್ಮ ಸೇನೆಗೆ ಯುದ್ಧ ವಿಮಾನ, ಬುಲೆಟ್ ಪ್ರೂಫ್ ಜಾಕೆಟ್ ಖರೀದಿಸಲು ಸಾಧ್ಯವಾಗಲಿಲ್ಲ. ನಮ್ಮ ಯೋಧರಿಗಾಗಿ ನೀವು ಏನು ಮಾಡಿದ್ದೀರಿ ಎಂದು ಸವಾಲು ಹಾಕಿದರು.

ಇಂದು ದೇಶದಲ್ಲಿ 300ಕ್ಕೂ ಹೆಚ್ಚು ರಕ್ಷಣಾ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಭಾರತವು ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡುತ್ತಿದೆ. ಇದುವೇ ಆತ್ಮನಿರ್ಭರ ಭಾರತ. ಡೋಕ್ಲಾಮ್ ಘಟನೆ ವೇಳೆಯಲ್ಲೂ ಪ್ರಧಾನಿ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸೈನಿಕರನ್ನು ಭೇಟಿ ಮಾಡಿದ್ದರು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.