
ನವದೆಹಲಿ: ನರೇಗಾ ಬದಲಿಗೆ ವಿಬಿ ಜಿ ರಾಮ್ ಜಿ ಕಾಯ್ದೆ ಜಾರಿಗೆ ತಂದಿರುವ ಬಗ್ಗೆ ಕೇಂದ್ರದ ಎನ್‌ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯವರು ನೋಟು ಅಮಾನ್ಯೀಕರಣದ ರೀತಿಯೇ ಏಕಾಂಗಿಯಾಗಿ ರಾಜ್ಯಗಳು ಮತ್ತು ಬಡವರ ಮೇಲೆ ವಿನಾಶಕಾರಿ ದಾಳಿ ಮಾಡಿದ್ದಾರೆ ಟೀಕಿಸಿದ್ದಾರೆ.
ಕೇಂದ್ರ ಸರ್ಕಾರದ ಕ್ರಮವನ್ನು ಕಾಂಗ್ರೆಸ್ ಬಲವಾಗಿ ವಿರೋಧಿಸುತ್ತದೆ. ವಿಪಕ್ಷಗಳು ಸಹ ಇದಕ್ಕೆ ಕೈಜೋಡಿಸಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ಯಾವುದೇ ಅಧ್ಯಯನ ನಡೆಸದೇ, ಸಂಪುಟದ ಅನುಮತಿ ಪಡೆಯದೇ ಪ್ರಧಾನಿ ನರೇಂದ್ರ ಮೋದಿ ಒಬ್ಬರೇ ನರೇಗಾ ಯೋಜನೆಯನ್ನು ನಾಶ ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಕಾಂಗ್ರೆಸ್ ಜನವರಿ 5ರಿಂದ ರಾಷ್ಟ್ರವ್ಯಾಪಿ ನರೇಗಾ ಬಚಾವೋ ಅಭಿಯಾನ ಆರಂಭಿಸಲು ಮುಂದಾಗಿದೆ.
ಯುಪಿಎ ಕಾಲದ ನರೇಗಾ ಕೇವಲ ಉದ್ಯೋಗದ ಕಾರ್ಯಕ್ರಮವಲ್ಲ, ಬದಲಾಗಿ ಪ್ರಪಂಚದಾದ್ಯಂತ ಮೆಚ್ಚುಗೆ ಪಡೆದ ಅಭಿವೃದ್ಧಿ ಚೌಕಟ್ಟು ಎಂದು ಹೇಳಿದ ರಾಹುಲ್, ಅದನ್ನು ರದ್ದುಗೊಳಿಸುವುದು ಹಕ್ಕು ಆಧಾರಿತ ವಿಧಾನ ಮತ್ತು ದೇಶದ ಒಕ್ಕೂಟ ರಚನೆಯ ಮೇಲಿನ ದಾಳಿಯಾಗಿದೆ ಎಂದು ಆರೋಪಿಸಿದ್ದಾರೆ.
‘ಇದು ರಾಜ್ಯಗಳು ಮತ್ತು ಬಡ ಜನರ ಮೇಲೆ ವಿನಾಶಕಾರಿ ದಾಳಿಯಾಗಿದ್ದು, ಇದನ್ನು ಪ್ರಧಾನಿ ಏಕಾಂಗಿಯಾಗಿ, ನೋಟು ರದ್ದತಿಯಂತೆಯೇ ನಡೆಸಿದ್ದಾರೆ. ಪ್ರಧಾನಿ ತಮ್ಮ ಸಚಿವ ಸಂಪುಟವನ್ನು ಕೇಳದೆ, ಅಧ್ಯಯನ ಮಾಡದೆ, ಏಕಾಂಗಿಯಾಗಿ ಎಂಜಿಎನ್‌ಆರ್‌ಇಜಿಎಯನ್ನು ನಾಶಪಡಿಸಿದ್ದಾರೆ’ಎಂದು ಅವರು ಹೇಳಿದ್ದಾರೆ.
20 ವರ್ಷಗಳಷ್ಟು ಹಳೆಯ ನರೇಗಾ ಬದಲಿಗೆ ವಿಬಿ-ಜಿ ರಾಮ್ ಜಿ ಮಸೂದೆಯನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅಂಗೀಕರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.