ರಾಹುಲ್ ಗಾಂಧಿ
ಕೃಪೆ: ಪಿಟಿಐ
ನವದೆಹಲಿ: ಅಪಾರ ಜನಪ್ರಿಯತೆ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೇಳಿಕೆಗಳನ್ನು ನೀಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇಲೆ ಗುಂಡಿನ ದಾಳಿಯೂ ನಡೆಯಬಹುದು ಎಂಬ ಎಬಿವಿಪಿ ಮಾಜಿ ನಾಯಕ, ಬಿಜೆಪಿ ವಕ್ತಾರ ಪ್ರಿಂಟು ಮಹದೇವನ್ ಹೇಳಿದ್ದಾರೆ. ಇದು ತೀವ್ರ ಕೋಲಾಹಲ ಸೃಷ್ಟಿಸಿದೆ.
ಇತ್ತೀಚೆಗೆ ಖಾಸಗಿ ವಾಹಿನಿಯೊಂದರ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹದೇವನ್, ಚರ್ಚೆ ವೇಳೆಯೇ ಈ ಹೇಳಿಕೆ ನೀಡಿದ್ದಾರೆ.
'ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಜನರ ಬೆಂಬಲ ಹೇಗಿದೆ ಎಂದರೆ, ರಾಹುಲ್ ಗಾಂಧಿ ನೀಡುತ್ತಿರುವ ಹೇಳಿಕೆಗಳಿಗಾಗಿ ಅವರ ಮೇಲೆ ಗುಂಡಿನ ದಾಳಿಯೂ ನಡೆಯುಬಹುದು' ಎಂದು ಪ್ರಿಂಟು ಹೇಳಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಆರ್‌ಎಸ್‌ಎಸ್‌ನ ವಿದ್ಯಾರ್ಥಿ ಸಂಘಟನೆ ಎಬಿವಿಪಿಯ ಕೇರಳ ಘಟಕದ ಮಾಜಿ ಅಧ್ಯಕ್ಷ ಮಹದೇವನ್ ಹೇಳಿಕೆಯನ್ನು, ಕಾಂಗ್ರೆಸ್ ಹಾಗೂ ಕೇರಳ ವಿರೋಧ ಪಕ್ಷಗಳ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ನೆಟ್ಟಿಗರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದು ಬಾಯಿತಪ್ಪಿ ಹೇಳಿರುವ ಮಾತಲ್ಲ. ಯೋಜಿತ, ಭಯಾನಕ ಬೆದರಿಕೆಯಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಕಿಡಿಕಾರಿದ್ದಾರೆ.
ಹಾಗೆಯೇ, ರಾಜಕೀಯ ಭಿನ್ನಾಭಿಪ್ರಾಯಗಳನ್ನು ಸಾಂವಿಧಾನಿಕ ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳಬೇಕು. ಆದರೆ, ಬಿಜೆಪಿ ನಾಯಕರು ವಿರೋಧ ಪಕ್ಷಗಳ ನಾಯಕರಿಗೆ ಟಿವಿ ನೇರಪ್ರಸಾರ ಕಾರ್ಯಕ್ರಮಗಳಲ್ಲೇ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಈ ವಿಚಾರವಾಗಿ, ಬಿಜೆಪಿ ನಾಯಕ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿರುವ ವೇಣುಗೋಪಾಲ್, ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.