ADVERTISEMENT

ಲೋಕಸಭೆ ಸದಸ್ಯತ್ವದಿಂದ ರಾಹುಲ್‌ ಗಾಂಧಿ ಅನರ್ಹ: ಮುಂದೇನು?

ರಾಹುಲ್‌ ಗಾಂಧಿ ಮುಂದಿರುವ ಅವಕಾಶಗಳೇನು? ಚುನಾವಣೆಗೆ ಸ್ಪರ್ಧೆ ಮಾಡಬಹುದೇ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಮಾರ್ಚ್ 2023, 10:20 IST
Last Updated 24 ಮಾರ್ಚ್ 2023, 10:20 IST
   

ಬೆಂಗಳೂರು: 2019ರ ಲೋಕಸಭೆ ಚುನಾವಣೆ ವೇಳೆ ಕೋಲಾರದಲ್ಲಿ ಮಾಡಿದ ಭಾಷಣ ಸಂಬಂಧ 2 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ರಾಹುಲ್‌ ಗಾಂಧಿ ಅವರ ಸದಸ್ವತ್ಯ ರದ್ದು ಮಾಡಿ ಲೋಕಸಭೆ ಸಚಿವಾಲಯ ಶುಕ್ರವಾರ ಆದೇಶ ಹೊರಡಿಸಿದೆ.

ಎಲ್ಲ ಕಳ್ಳರ ಉಪನಾಮ ಮೋದಿ ಎಂದೇ ಯಾಕಿರುತ್ತದೆ ಎಂದು ರಾಹುಲ್‌ ಗಾಂಧಿ ತಮ್ಮ ಭಾಷಣದಲ್ಲಿ ವ್ಯಂಗ್ಯವಾಡಿದ್ದರು. ಈ ಸಂಬಂಧ ಸೂರತ್‌ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ದೂರು ದಾಖಲಾಗಿತ್ತು. ಪ್ರಕರಣಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಕೋರ್ಟ್‌ ಗುರುವಾರ ಆದೇಶ ಹೊರಡಿಸಿತ್ತು. ಜತೆಗೆ ಶಿಕ್ಷೆಯನ್ನು 30 ದಿನಗಳ ಕಾಲ ಅಮಾನತಿನಲ್ಲಿರಿಸಿ,ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿತ್ತು.

ಮಾರ್ಚ್‌ 23ರಿಂದ ಅನ್ವಯವಾಗುವಂತೆ ರಾಹುಲ್‌ ಗಾಂಧಿಯವರ ಲೋಕಸಭೆ ಸದಸ್ಯತ್ವ ಅನರ್ಹಗೊಂಡಿದೆ.

ADVERTISEMENT

1951ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್‌ 8(3) ಅನ್ವಯ, ಜನಪ್ರತಿನಿಧಿಯೊಬ್ಬ ಕನಿಷ್ಠ ಎರಡು ವರ್ಷ ಶಿಕ್ಷೆಗೆ ಗುರಿಯಾದರೆ, ತಕ್ಷಣದಿಂದ ಜಾರಿಗೆ ಬರುವಂತೆ ಅವರ ಸದಸ್ಯತ್ವ ಅನರ್ಹವಾಗಲಿದೆ. ಸೂರತ್‌ ಕೋರ್ಟ್‌ನ ತೀರ್ಪಿನ ಆಧಾರದಲ್ಲಿ ಸದಸ್ಯತ್ವ ರದ್ದು ಮಾಡಿ ಲೋಕಸಭೆ ಸಚಿವಾಲಯ ಆದೇಶ ಹೊರಡಿಸಿದೆ.

ಸದ್ಯ ರಾಹುಲ್‌ ಗಾಂಧಿ ಪ್ರತಿನಿಧಿಸುತ್ತಿರುವ ವಯನಾಡ್‌ ಲೋಕಸಭಾ ಕ್ಷೇತ್ರ ತೆರವಾಗಿದೆ. ಇನ್ನು ಆರು ತಿಂಗಳಲ್ಲಿ ಚುನಾವಣೆ ನಡೆಸುವ ಜವಾಬ್ದಾರಿ ಚುನಾವಣಾ ಆಯೋಗದ್ದು. ಜತೆಗೆ ಕೇಂದ್ರ ದೆಹಲಿಯಲ್ಲಿ ತಮಗೆ ನೀಡಲಾಗಿರುವ ಸರ್ಕಾರಿ ಬಂಗಲೆಯನ್ನು ರಾಹುಲ್‌ ಗಾಂಧಿ ಅವರು ತೊರೆಯಬೇಕು.

ಇನ್ನು ಸೂರತ್‌ ನ್ಯಾಯಾಲಯ ನೀಡಿದ ತೀರ್ಪನ್ನು ಪ‍್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಅವಕಾಶ ರಾಹುಲ್‌ ಗಾಂಧಿ ಅವರಿಗಿದೆ. ಶಿಕ್ಷೆಗೆ ಹಾಗೂ ಅನರ್ಹತೆಗೆ ತಡೆ ನೀಡುವ ಅಧಿಕಾರ ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ಗೆ ಇದೆ.

ಒಂದು ವೇಳೆ ಉನ್ನತ ನ್ಯಾಯಾಲಯದಲ್ಲೂ ಇದೇ ತೀರ್ಪು ಬಂದರೆ, ರಾಹುಲ್ ಗಾಂಧಿ 2 ವರ್ಷ ಜೈಲು ಶಿಕ್ಷೆ ಅನುಭವಿಸಬೇಕು. ಅಲ್ಲದೇ, ಶಿಕ್ಷೆ ಪೂರ್ಣಗೊಳಿಸಿದ ಬಳಿಕ 6 ವರ್ಷ ಚುನಾವಣೆಗೆ ಸ್ಪರ್ಧೆ ಮಾಡುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.