ರಾಹುಲ್ ಗಾಂಧಿ
ಪಿಟಿಐ ಚಿತ್ರ
ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಕ್ಷೇತ್ರದ ಫಲಿತಾಂಶದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ‘2024 ರ ಚುನಾವಣೆಯ ಸಮಯದಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷ ಮತಗಳ ಕಳ್ಳತನ ನಡೆದಿದೆ’ ಎಂದು ಆರೋಪಿಸಿದರು.
ಮತ ಕಳವಿನ ಕುರಿತ ‘ಅಣು ಬಾಂಬ್’ ಸಿಡಿಸುತ್ತೇನೆ ಎಂದು ಕಳೆದ ವಾರ ಘೋಷಿಸಿದ್ದ ಕಾಂಗ್ರೆಸ್ ನಾಯಕ, ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮತಕಳವಿನ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿದರು. ಬಿಜೆಪಿ ಹಾಗೂ ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ʼಬಿಜೆಪಿಯೊಂದಿಗೆ ಆಯೋಗದ ಮೈತ್ರಿಯು ಸಂವಿಧಾನದ ವಿರುದ್ಧದ ಅಪರಾಧ’ ಎಂದು ವಿಶ್ಲೇಷಿಸಿದರು.
ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಪಕ್ಷವು 16 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಆಂತರಿಕ ಸಮೀಕ್ಷೆಗಳಲ್ಲಿ ಗೊತ್ತಾಗಿತ್ತು. ಆದರೆ, ಪಕ್ಷವು ಗೆದ್ದಿದ್ದು ಒಂಬತ್ತು ಕ್ಷೇತ್ರಗಳನ್ನು. ಅನಿರೀಕ್ಷಿತವಾಗಿ ಏಳು ಕ್ಷೇತ್ರಗಳನ್ನು ಕಳೆದುಕೊಂಡ ಬಳಿಕ ಒಂದು ಲೋಕಸಭಾ ಕ್ಷೇತ್ರದ ಬಗ್ಗೆ ಆರು ತಿಂಗಳು ಅಧ್ಯಯನ ನಡೆಸಿದೆವು. ನಿರ್ದಿಷ್ಟವಾಗಿ ಮಹದೇವಪುರ ಕ್ಷೇತ್ರದ ಕುರಿತು ವಿಶ್ಲೇಷಣೆ ನಡೆಸಲಾಯಿತು ಎಂದು ಅವರು ಮಾಹಿತಿ ನೀಡಿದರು.
ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಮಹದೇವಪುರ ಹೊರತುಪಡಿಸಿ ಉಳಿದ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿತ್ತು. ಆದರೆ, ಮಹದೇವಪುರದಲ್ಲೇ ಬಿಜೆಪಿಗೆ 1,14,046 ಮತಗಳ ಮುನ್ನಡೆ ಸಿಕ್ಕಿತ್ತು. ಅಧ್ಯಯನ ನಡೆಸಿದಾಗ 1,00,250 ಮತದಾರರು ನಕಲಿ ಎಂಬುದು ಗೊತ್ತಾಯಿತು. ಹೀಗಾಗಿ, ಈ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿತು ಎಂದರು.
‘ನಾವು ತುಂಬಾ ಪ್ರೀತಿಸುವ ಪ್ರಜಾಪ್ರಭುತ್ವವು ಅಸ್ತಿತ್ವದಲ್ಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ ಅವರು, ‘ಕಾಂಗ್ರೆಸ್ ಪಕ್ಷವು ವೋಟ್ ಚೋರಿ (ಮತಕಳ್ಳತನ) ಕುರಿತು ಸದೃಢ ಮತ್ತು ಕ್ರಿಮಿನಲ್ ಸಾಕ್ಷ್ಯಗಳನ್ನು ಕಲೆ ಹಾಕಿದೆ. ಆದರೆ, ಚುನಾವಣಾ ಆಯೋಗವು ಅದನ್ನು ನಾಶಪಡಿಸುವಲ್ಲಿ ವ್ಯಸ್ತವಾಗಿದೆ. ಈಗ ನ್ಯಾಯಾಂಗ ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡಬೇಕುʼ ಎಂದು ಒತ್ತಾಯಿಸಿದರು.
ತಮ್ಮ ಹೇಳಿಕೆಯ ಕುರಿತು ಸಹಿ ಹಾಕಿದ ದಾಖಲೆಗಳನ್ನು ಚುನಾವಣಾ ಆಯೋಗ ಕೇಳಿರುವ ಬೆನ್ನಲ್ಲೇ ರಾಹುಲ್ ಗಾಂಧಿ, ‘ನಾನು ಒಬ್ಬ ರಾಜಕಾರಣಿ ಮತ್ತು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದೇನೆ. ಅದನ್ನು ತನ್ನ ಪ್ರತಿಜ್ಞೆ ಎಂದು ಪರಿಗಣಿಸಬಹುದು. ಆಸಕ್ತಿಕರ ವಿಷಯವೆಂದರೆ, ನಾನು ಪ್ರಸ್ತಾಪಿಸಿದ ವಿಷಯವನ್ನು ಆಯೋಗ ನಿರಾಕರಿಸಿಲ್ಲ. ನಾನು ತೋರಿಸಿದ ಮತಪಟ್ಟಿಗಳನ್ನು ತಪ್ಪು ಎಂದು ಹೇಳಿಲ್ಲ. ಅವರು ಹೇಳುತ್ತಿರುವುದೇನೆಂದರೆ ರಾಹುಲ್ ಗಾಂಧಿ ಅದನ್ನು ಸಾಕ್ಷ್ಯದೊಂದಿಗೆ ಹೇಳಬೇಕು ಎಂಬುದು. ಅವರಿಗೆ ಸತ್ಯ ಗೊತ್ತಿದೆ ಎಂಬುದು ಇಲ್ಲಿ ಸ್ಪಷ್ವವಾಗುತ್ತದೆʼ ಎಂದು ಪ್ರತಿಕ್ರಿಯಿಸಿದರು.
* ಹಲವು ಮತಗಟ್ಟೆಗಳಲ್ಲಿ ಒಬ್ಬ ಮತದಾರನದ್ದೇ ಹೆಸರು ಇರುವ ಬಗ್ಗೆ ಉಲ್ಲೇಖಿಸಿದ ರಾಹುಲ್ 26 ವರ್ಷದ ಪುರುಷ ಮತದಾರನೊಬ್ಬ ಮತಗಟ್ಟೆ ಸಂಖ್ಯೆಗಳಾದ 116 124 125 ಮತ್ತು 126ರಲ್ಲಿ ತಮ್ಮ ಹೆಸರನ್ನು ಹೊಂದಿದ್ದರು. ಈ ಮತದಾರರ ಮತಪಟ್ಟಿಯಲ್ಲಿನ ಚಿತ್ರದ ಪ್ರಕಾರ ಆತ ನಾಲ್ಕು ವಿಭಿನ್ನ ಮತ ಕಾರ್ಡ್‌ಗಳನ್ನು ಹೊಂದಿದ್ದ.
* ಮತ್ತೊಬ್ಬ ಮತದಾರ 37 ವರ್ಷದ ಪುರುಷ ಬೂತ್ ಸಂಖ್ಯೆ 458 ಮತ್ತು 459ರಲ್ಲಿ ಅಲ್ಲದೇ ಲಖನೌದಲ್ಲಿ ಕೂಡ ಮತದಾನದ ಪಟ್ಟಿಯಲ್ಲಿ ಹೆಸರನ್ನು ಹೊಂದಿದ್ದಾರೆ. 33 ವರ್ಷದ ಪುರುಷ ಮತದಾರ ಬೂತ್ ಸಂಖ್ಯೆ 513 ಮತ್ತು 321ರಲ್ಲಿ ಹಾಗೂ ವಾರಾಣಸಿಯಲ್ಲಿ ಮತ ಹಕ್ಕು ಹೊಂದಿದ್ದಾರೆ.
* ಮೊದಲ ಬಾರಿಗೆ ಮತದಾರರಾಗಿ ನೋಂದಣಿಯಾದಾಗ ಬಳಕೆಯಾಗುವ ನಮೂನೆ 6 ದುರುಪಯೋಗದ ಕುರಿತು ಪ್ರಶ್ನೆಗಳನ್ನು ಎತ್ತಿದ ಅವರು ಅದನ್ನು ವ್ಯಾಪಕ ಪ್ರಮಾಣದಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗಿದೆ. 95 90 85 ವರ್ಷದವರೂ ಈ ಪಟ್ಟಿಯಲ್ಲಿ ಸೇರಿದ್ದಾರೆ. 70 ವರ್ಷದ ಶಕುಲ್ ರಾಣಿ ಎಂಬ ಹೆಸರಿನ ಮಹಿಳೆಯು ಎರಡು ತಿಂಗಳುಗಳಲ್ಲಿ ಎರಡು ಬಾರಿ ನೋಂದಣಿಯಾಗಿದ್ದು ಈ ಮಹಿಳೆ ಅಥವಾ ಆಕೆಯ ಹೆಸರಿನ ಇನ್ಯಾರೋ ಎರಡು ಬಾರಿ ಮತ ಚಲಾಯಿಸುತ್ತಿದ್ದಾರೆ.
* ಬೂತ್ ಸಂಖ್ಯೆ 470ರ ಏಕ ಕೋಣೆಯ ಸಣ್ಣ ಮನೆಯಲ್ಲಿ 80 ಮತದಾರರಿದ್ದರು. ಬೂತ್ ಸಂಖ್ಯೆ 791ರಲ್ಲಿ ಇಂತಹುದೇ ಮನೆಯಲ್ಲಿ 46 ಮತದಾರರು ಇದ್ದರು. ಒಂದು ಕಡೆಯಲ್ಲಿ 68 ಮತದಾರರು ಇದ್ದರು. ಈ ಬಗ್ಗೆ ಪರಿಶೀಲನೆಗೆ ನಮ್ಮ ತಂಡವು ಹೋದಾಗ ಅಲ್ಲಿದ್ದವರು ದಾಳಿ ಮಾಡಲು ಯತ್ನಿಸಿದರು.
* 40009 ಮತದಾರರ ಪೈಕಿ ಅನೇಕರು ಸೊನ್ನೆ (0)ಯಂತಹ ವಿಳಾಸಗಳನ್ನು ಹೊಂದಿದ್ದಾರೆ. ಅದು ‘ಅಸ್ತಿತ್ವದಲ್ಲಿಲ್ಲ ಅಥವಾ ಪರಿಶೀಲಿಸಬಹುದು’ ಎಂದು ತೋರಿಸಿದೆ. ತಂದೆ ಅಥವಾ ಗಂಡನ ಹೆಸರುಗಳ ಕಾಲಮ್‌ಗಳು ಅಸ್ಪಷ್ಟವಾಗಿವೆ.
ಮತದಾರರ ಪಟ್ಟಿಯಲ್ಲಿ ಅನರ್ಹರ ಸೇರ್ಪಡೆ ಅಥವಾ ಅರ್ಹರನ್ನು ಹೊರಗಿಟ್ಟ ಬಗ್ಗೆ ಸಹಿ ಮಾಡಿದ ಘೋಷಣೆಯೊಂದಿಗೆ ಹೆಸರುಗಳನ್ನು ರಾಹುಲ್ ಗಾಂಧಿ ಸಲ್ಲಿಸಲಿ. ಆಗ ನಾವು ಕಾನೂನು ಕ್ರಮ ಕೈಗೊಳ್ಳಬಹುದು. 2024ರ ವಿಧಾನಸಭಾ ಚುನಾವಣೆಗೆ ಮೊದಲು ಪ್ರಕಟಿಸಿದ ಮತದಾರರ ಪಟ್ಟಿಗಳ ವಿರುದ್ಧ ಕಾಂಗ್ರೆಸ್ ಯಾವುದೇ ಆಕ್ಷೇಪಣೆ ಸಲ್ಲಿಸಿಲ್ಲ. 2024ರ ಆಗಸ್ಟ್‌ನಲ್ಲಿ ಮತದಾರರ ಕರಡು ಪಟ್ಟಿ ಮತ್ತು ಸೆಪ್ಟೆಂಬರ್‌ನಲ್ಲಿ ಅಂತಿಮ ಪಟ್ಟಿಯನ್ನು ಕಾಂಗ್ರೆಸ್ ಜೊತೆ ಹಂಚಿಕೊಳ್ಳಲಾಗಿತ್ತು ಆದರೆ ಯಾವುದೇ ಮೇಲ್ಮನವಿ ಸಲ್ಲಿಕೆಯಾಗಿಲ್ಲಎಸ್. ಚೊಕ್ಕಲಿಂಗಂ ಮಹಾರಾಷ್ಟ್ರದ ಮುಖ್ಯ ಚುನಾವಣಾ ಅಧಿಕಾರಿ
ಜನರು ಕಾಂಗ್ರೆಸ್‌ಗೆ ಜನಾದೇಶ ನೀಡದ ಕಾರಣ ಹತಾಶೆ ಮತ್ತು ಕೋಪದಿಂದ ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗದ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
ಇಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್, ‘ಬೇಜವಾಬ್ದಾರಿ ಹಾಗೂ ನಾಚಿಕೆ ಇಲ್ಲದ ನಡವಳಿಕೆಗಾಗಿ ಕಾಂಗ್ರೆಸ್ ಪಕ್ಷವನ್ನು ಮತದಾರರು ತಿರಸ್ಕರಿಸುತ್ತಲೇ ಇದ್ದಾರೆ’ ಎಂದರು.
‘ಸರ್ವಜ್ಞನಗರದಲ್ಲೂ ಪರಿಶೀಲನೆ ಮಾಡಲಿ’
‘ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸರ್ವಜ್ಞನಗರದಲ್ಲೂ ಮತ ಪ್ರಮಾಣ ಹೆಚ್ಚಾಗಿದೆ. ಇಲ್ಲಿ ಕಾಂಗ್ರೆಸ್‌ಗೆ ಮುನ್ನಡೆ ಸಿಕ್ಕಿದೆ. ಮತ ಪ್ರಮಾಣ ಹೆಚ್ಚಾಗಿರುವ ಬಗ್ಗೆ ರಾಹುಲ್ ಗಾಂಧಿ ಅವರು ಅಲ್ಲೂ ಅಧ್ಯಯನ ನಡೆಸಲಿ’ ಎಂದು ಸಂಸದ ಪಿ.ಸಿ.ಮೋಹನ್ ಸವಾಲು ಎಸೆದರು.
ಮಾನನಷ್ಟ ಪ್ರಕರಣಗಳಲ್ಲಿ ಜಾಮೀನು ಪಡೆಯಲು ರಾಹುಲ್ ಅವರು ದೇಶದಾದ್ಯಂತ ಅಲೆದಾಡುತ್ತಲೇ ಇದ್ದಾರೆ. ಅಂತಹ ವ್ಯಕ್ತಿಯೇ ಯಾರನ್ನಾದರೂ ವಂಚಕ ಎಂದು ಕರೆಯುತ್ತಾರೆ. ಬೇಜವಾಬ್ದಾರಿಯ ವ್ಯಕ್ತಿ ಆಗಿರುವ ಅವರಿಗೆ ಸಾಂವಿಧಾನಿಕ ಸಂಸ್ಥೆಯ ಬಗ್ಗೆ ಏನು ಮಾತನಾಡಬೇಕೆಂದು ತಿಳಿದಿಲ್ಲ ಎಂದರು.
ಸುದ್ದಿಗಾರರ ಜತೆಗೆ ಮಾತನಾಡಿದ ಅವರು ‘2009ರಿಂದ ಮತ ಪ್ರಮಾಣ ನಿರಂತರವಾಗಿ ಏರಿಕೆಯಾಗುತ್ತಿದೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ರಾಜ್ಯ ಸರ್ಕಾರದ ಅಧಿಕಾರಿಗಳ ಸಹಯೋಗದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತದೆ. ಮತ ಕಳವು ಮಾಡಿದ್ದರಿಂದಲೇ ಕಾಂಗ್ರೆಸ್ ಒಂಬತ್ತು ಕ್ಷೇತ್ರಗಳನ್ನು ಗೆದ್ದಿತ್ತು’ ಎಂದು ಆರೋಪಿಸಿದರು.
‘ಐದು ಗಂಟೆಯ ಬಳಿಕ ಮತ ಪ್ರಮಾಣ ಹೆಚ್ಚಾಗುವುದು ಏಕೆ ಎಂಬುದು ನನಗೆ ಗೊತ್ತಿಲ್ಲ. ಈ ಬಗ್ಗೆ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಕೇಳಲಿ. ಚುನಾವಣಾ ಆಯೋಗದವರು ಕೊಡದಿದ್ದರೆ ನಾನೇನು ಮಾಡಲು ಸಾಧ್ಯʼ ಎಂದು ಅವರು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗದ ಮೇಲೆ ಆರೋಪ ಹೊರಿಸುವ ಮೊದಲು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಯಾವ ರೀತಿಯಲ್ಲಿ ಗೆದ್ದಿತು ಎಂಬುದಕ್ಕೆ ರಾಹುಲ್ ಗಾಂಧಿ ಉತ್ತರಿಸಲಿ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಸವಾಲು ಹಾಕಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.